ವಾಷಿಂಗ್ಟನ್, ಫೆ 22 (Daijiworld News/MB) : ಪಾಕಿಸ್ತಾನ ತನ್ನ ನೆಲದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕಿದರೆ ಮಾತ್ರ ಭಾರತದೊಂದಿಗೆ ಯಶಸ್ವಿ ಮಾತುಕತೆಯಾಗಲು ಸಾಧ್ಯ ಎಂದು ಅಮೆರಿಕ ಹೇಳಿದೆ.
ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕಾಶ್ಮೀರ ವಿಚಾರದದಲ್ಲಿ ಮಧ್ಯಸ್ಥಿಕೆ ವಹಿಸುವ ಬಗ್ಗೆ ಮಾತನಾಡಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಟ್ರಂಪ್ ಭಾರತ–ಪಾಕಿಸ್ತಾನ ನಡುವಣ ಸಮಸ್ಯೆಗಳನ್ನು ಬಗೆಹರಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಉಭಯ ರಾಷ್ಟ್ರಗಳು ಭಿನ್ನಾಭಿಪ್ರಾಯ ಬದಿಗಿಟ್ಟು ದ್ವೀಪಕ್ಷೀಯ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆಯನ್ನು ಮಟ್ಟಹಾಕುವಲ್ಲಿ ಪಾಕಿಸ್ತಾನದ ಪ್ರಯತ್ನವೇ ಉಭಯ ರಾಷ್ಟ್ರಗಳ (ಭಾರತ–ಪಾಕಿಸ್ತಾನ) ನಡುವಣ ಯಶಸ್ವಿ ಮಾತುಕತೆಗೆ ಪ್ರಮುಖ ಅಡಿಗಲ್ಲಾಗಲಿದೆ ಎಂದು ನಾವು ಭಾವಿಸಿದ್ದೇವೆ. ಅದನ್ನು ನಾವು ಎದುರುನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷರು ಎರಡೂ ರಾಷ್ಟ್ರಗಳನ್ನು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವಂತೆ ಹಾಗೂ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುವ ಹೇಳಿಕೆ, ಕ್ರಮಗಳಿಂದ ದೂರ ಉಳಿಯಲು ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.