ಜೆರುಸಲೆಂ, ಫೆ.27 (DaijiworldNews/PY) : ಪ್ರಾಣಿಗಳು ಜೀವಂತವಾಗಿರಲು ಆಮ್ಲಜನಕವನ್ನು ಉಸಿರಾಡುವುದು ಅನಿವಾರ್ಯ ಎಂಬ ಸಿದ್ಧಾಂತ ಚಾಲ್ತಿಯಲ್ಲಿದೆ. ಆದರೆ ಆಮ್ಲಜನಕದ ಸಹಾಯವಿಲ್ಲದೇ ಬದುಕುವ ಜೀವಿಯೊಂದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಇಸ್ರೇಲ್ನ ಟೆಲ್ಅವಿವ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಪೂರ್ವ ಸಂಶೋಧನೆಯೊಂದನ್ನು ಮಾಡಿದ್ದಾರೆ.
ಮೀನಿನ ಜಾತಿಗೆ ಸೇರಿದ ಅತಿಸಣ್ಣ, ಬರೀ 10 ಜೀವಕೋಶಗಳನ್ನು ಹೊಂದಿರುವ ಪರಾಶ್ರಿತ ಜೀವಿಯೊಂದು ಆಮ್ಲಜನಕ ಉಸಿರಾಡದೇ ಬದುಕುತ್ತದೆ ಎಂದು ಗೊತ್ತಾಗಿದ್ದು, ಇದನ್ನು ವಿವಿ ಪ್ರೊಫೆಸರ್ ಡೊರೊಥಿ ಹಚನ್ ಬಹಿರಂಗಪಡಿಸಿದ್ದಾರೆ.
ಇದನ್ನು ಹೆನ್ನೆಗುಯ ಸಲ್ಮನಿಕೊಲ ಎಂದು ಹೆಸರಿಸಲಾಗಿದೆ. ಇದೊಂದು ಪರಾಶ್ರಿತ ಜೀವಿ. ಇದು ಜೆಲ್ಲಿಫಿಶ್ ಅಥವಾ ಸಮುದ್ರದಲ್ಲಿರುವ ಕೋರಲ್ ಪ್ರಬೇಧಗಳ ಸಂಬಂಧಿಯಾಗಿದೆ.
ಇದು ಬೆಳೆದಂತೆ ಆಮ್ಲಜನಕವನ್ನು ಉಸಿರಾಡುವುದನ್ನೇ ನಿಲ್ಲಿಸುತ್ತದೆ. ಆದರೆ ಇದು ಶಕ್ತಿ ಪಡೆದುಕೊಳ್ಳುವುದಕ್ಕೆ ಯಾವ ಮಾರ್ಗ ಅನುಸರಿಸುತ್ತದೆ ಎಂದು ತಿಳಿದಿಲ್ಲ. ಇದು ಉಸಿರಾಡದೆಯೂ ಬದುಕಬಹುದು ಅಥವಾ ಆಮ್ಲಜನಕದ ಅಗತ್ಯವಿಲ್ಲದೆಯೂ ಜೀವಿಸಲು ಸಾಧ್ಯ ಎಂಬುದನ್ನು ಈ ಸಂಶೋಧನೆ ತಿಳಿಸಿಕೊಟ್ಟಿದೆ.
ವಿಜ್ಞಾನಿಗಳ ಊಹೆ ಪ್ರಕಾರ, ತಾನು ಆಶ್ರಯಿಸಿರುವ ಜೀವಿಯ ಜೀವಕೋಶದಿಂದ ಶಕ್ತಿ ಪಡೆಯಬಹುದು ಅಥವಾ ಉಸಿರಾಟ ಪದ್ಧತಿಯೇ ಬೇರೆಯಿರಬಹುದು ಎಂದು ಅಂದಾಜಿಸಿದ್ದಾರೆ.
ಆದರೆ ವಿಜ್ಞಾನಿಗಳು ಮಾತ್ರ ಅಚಾನಕ್ಕಾಗಿ ಇದನ್ನು ಪತ್ತೆಹಚ್ಚಿದ್ದಾರೆ. ಪ್ರಾಣಿಗಳ ಜೀವಕೋಶದಲ್ಲಿ ಮೈಟೊಕಾಂಡ್ರಿಯ ಎಂಬ ಭಾಗವಿರುತ್ತದೆ. ಅದು ಆಮ್ಲಜನಕ ಹಿಡಿದಿಟ್ಟುಕೊಂಡು ಶಕ್ತಿ ಉತ್ಪಾದಿಸುತ್ತದೆ.
ಹೆನ್ನೆಗುಯಾ ಜೆನೋಮ್ ಜೋಡಿಸುವ ಹಂತದಲ್ಲಿ ಈ ಡಿಎನ್ಎ ಸರಣಿಯಲ್ಲಿ ಮೈಟೋಕಾಂಡ್ರಿಯ ಜೆನೋಮ್ ಇಲ್ಲ ಎನ್ನುವ ವಿಚಾರವನ್ನು ಸಂಶೋಧಕರು ಪತ್ತೆ ಮಾಡಿದ್ದು, ಜೆನೋಮ್ ಆಮ್ಲಜನಕವನ್ನು ಹೀರಿಕೊಂಡು ಶಕ್ತಿಯನ್ನು ಉತ್ಪಾದಿಸುವ ಶಕ್ತಿ ಕೇಂದ್ರವಾಗಿದೆ. ಈ ಪ್ರಾಣಿಯಲ್ಲಿ ಜೆನೋಮ್ ಇಲ್ಲದ ಕಾರಣದಿಂದ ಇದು ಉಸಿರಾಡುವುದಿಲ್ಲ ಎಂದು ದೃಢಪಟ್ಟಿದೆ ಎಂದು ತಿಳಿಸಲಾಗಿದೆ.