ಟೆಹ್ರಾನ್, ಫೆ 28 (Daijiworld News/MB) : ಇರಾನ್ನಲ್ಲಿ ಕೊರೋನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿದ್ದು ಇರಾನ್ನ ಉಪಾಧ್ಯಕ್ಷರೇ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ.
ಈ ಬಗ್ಗೆ ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಣೆ ಹೊರಡಿಸಿದ್ದು ಇರಾನ್ನಲ್ಲಿ 7 ಮಂದಿ ಉಪಾಧ್ಯಕ್ಷರ ಪೈಕಿ ಒಬ್ಬರಾದ ಮಹಿಳಾ ವ್ಯವಹಾರಗಳ ಖಾತೆ ನೋಡಿಕೊಳ್ಳುತ್ತಿರುವ ಮಸ್ಸೂಮ್ ಇಬಿಕ್ತಾರ್ ಅವರಿಗೆ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಮತ್ತೆ 106 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 245 ಆಗಿದೆ. ಫೆ. 19ರಂದು ಮೊದಲ ಪ್ರಕರಣ ದಾಖಲಾದ ಬಳಿಕ ಗರಿಷ್ಠ ಸಂಖ್ಯೆಯ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನುಶ್ ಜಹಾನ್ಪುರ ಹೇಳಿದ್ದಾರೆ.
ಚೀನಾ ಹೊರತು ಪಡಿಸಿದರೆ ಕೊರೋನಾ ವೈರಸ್ನಿಂದಾಗಿ ಹೆಚ್ಚು ಮಂದಿ ಸಾವನ್ನಪ್ಪಿದ ದೇಶ ಇದಾಗಿದೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ವ್ಯವಹಾರ ವಿಭಾಗದ ಮುಖ್ಯಸ್ಥ ಮುಜ್ತಬಾ ಝೆಲ್ನೂರ್ ಅವರಿಗೂ ಕೂಡಾ ಸೋಂಕು ತಗಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.