ನ್ಯೂಯಾರ್ಕ್, ಮಾ.21 (DaijiworldNews/PY) : ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಗಲ್ಲುಶಿಕ್ಷೆ ಮೇಲೆ ನಿಷೇಧ ಹೇರುವಂತೆ ವಿಶ್ವಸಂಸ್ಥೆ ಆದೇಶ ಹೊರಡಿಸಿದೆ. ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ನೇಣುಗಂಬಕ್ಕೇರಿಸಿದ ಮರುದಿನವೇ ವಿಶ್ವಸಂಸ್ಥೆ ಮರಣದಂಡನೆ ಶಿಕ್ಷೆ ಮೇಲೆ ನಿಷೇಧ ಹೇರುವಂತೆ ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಆದೇಶಿಸಿದೆ.
ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಹಾಗೂ ಅಕ್ಷಯ್ ಕುಮಾರ್ ಸಿಂಗ್ ಅವರನ್ನು ಏಳು ವರ್ಷಗಳ ಬಳಿಕ ಶುಕ್ರವಾರ ಬೆಳಗ್ಗೆ ನಾಲ್ವರನ್ನು ನೇಣಿಗೇರಿಸಲಾಗಿತ್ತು.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡ್ಯುಜರಿಕ್ ಅವರು, ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದು, ಜಗತ್ತಿನಾದ್ಯಂತ ಗಲ್ಲುಶಿಕ್ಷೆ ಮೇಲೆ ನಿಷೇಧ ಹೇರಬೇಕು ಎಂದು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ತಿಳಿಸಿದೆ.
ಎಲ್ಲಾ ದೇಶಗಳಿಗೆ ಮರಣದಂಡನೆಯ ಶಿಕ್ಷೆಯನ್ನು ನಿಲ್ಲಿಸುವಂತೆ ಕರೆ ನೀಡುತ್ತೇವೆ ಅಥವಾ ಮರಣದಂಡನೆ ಶಿಕ್ಷೆಗೆ ಕನಿಷ್ಠ ನಿಷೇಧ ಹೇರಬೇಕಿದೆ ಎಂದು ಸ್ಟೀಫನ್ ಡ್ಯುಜರಿಕ್ ಹೇಳಿದ್ಧಾರೆ.