ಅಮೇರಿಕಾ, ಮಾ 27 (Daijiworld News/MSP): ಕೊರೊನಾದಿಂದ ಯಾರದರೂ ಸುಮ್ಮನೆ ಕೆಮ್ಮಿದರೂ, ಸೀನಿದರೂ ಭಯ ಪಟ್ಟು ಅನುಮಾನಪಡುವಂತಾಗಿದೆ. ಇದೇ ರೀತಿಯ ಘಟನೆ ಅಮೇರಿಕಾದ ಪೆನ್ಸಿಲೇನಿಯಾದಲ್ಲಿ ನಡೆದಿದ್ದು ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಜೋರಾಗಿ ಕೆಮ್ಮಿದ್ದಕ್ಕೆ ಅಂಗಡಿ ಮಾಲೀಕ ಬರೋಬ್ಬರಿ 26 ಲಕ್ಷ ರೂ. ಕಳೆದುಕೊಂಡಿದ್ದಾನೆ.
ಒಂದೇ ಒಂದು ಕೆಮ್ಮಿಗೆ ಪೆನ್ಸಿಲೇನಿಯಾದಲ್ಲಿ ಅಂಗಡಿಯಲ್ಲಿ ಸುಮಾರು 26 ಲಕ್ಷ ಮೌಲ್ಯದ ಆಹಾರವನ್ನು ಮಾಲೀಕ ಹೊರಗೆ ಎಸೆದಿದ್ದಾನೆ. ಅಂಗಡಿಗೆ ತೆರಳಿದ್ದ ಮಹಿಳೆ ತನಗೆ ಬೇಕಾದ ಸಾಮಾಗ್ರಿ ಖರೀದಿಸಿ ಬಿಲ್ಲಿಂಗ್ ಸೆಂಟರ್ನತ್ತ ತೆರಳಿದ್ದಳು. ಜನ ಜಾಸ್ತಿ ಇದ್ದುದರಿಂದ ತಮಾಷೆ ಮಾಡಲೆಂದು ಜೋರಾಗಿ ಎರಡು ಬಾರಿ ಕೆಮ್ಮಿದಳು. ಈಗಾಗಲೇ ಅಮೆರಿಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಆಕೆ ಕೆಮ್ಮುತ್ತಿದ್ದಂತೆ ಸುತ್ತಲೂ ಇದ್ದವರು ಭಯದಿಂದ ದೂರ ಓಡಿಹೋದರು.
ಆಕೆ ಅಂಗಡಿಯಲ್ಲಿ ಕೆಮ್ಮಿದ್ದರಿಂದ ಗ್ರಾಹಕರೆಲ್ಲರೂ ಅಲ್ಲಿನ ಸಾಮಾಗ್ರಿ ಹೊರಹಾಕಿ, ಇಡೀ ಅಂಗಡಿಗ ಸ್ವಚ್ಚಗೊಳಿಸಿ, ಹೊಸ ವಸ್ತುಗಳನ್ನು ತರಿಸಬೇಕೆಂದು ಒತ್ತಾಯಿಸಿದರು. ಅಂಗಡಿ ಮಾಲೀಕನೂ ಭಯಗೊಂಡು ಸುಮಾರು 26 ಲಕ್ಷ ರೂ (35,000 ಡಾಲರ್) ಮೌಲ್ಯದ ವಸ್ತುಗಳನ್ನು ಹೊರಹಾಕಿದ್ದಾನೆ.
ಘಟನೆ ಬಳಿಕ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆಗ ತಾನು ಉದ್ದೇಶಪೂರ್ವಕವಾಗಿ ಕೆಮ್ಮಿರುವುದನ್ನು ತಿಳಿಸಿದ್ದಾಳೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಆಕೆಗೆ ಪರೀಕ್ಷೆ ನಡೆಸಲಾಗಿದೆ. ಆದರೆ ಸದ್ಯ ಮಹಿಳೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಆಕೆಯ ಕೆಮ್ಮಿಗೆ ಅಂಗಡಿ ಮಾಲೀಕ ಮಾತ್ರ 26 ಲಕ್ಷ ತೆರಬೇಕಾಯಿತು.