ನವದೆಹಲಿ, ಮಾ.28 (Daijiworld News/MB) : ಅಮೆರಿಕ ಕೊರೊನಾ ವೈರಸ್ ಅನ್ನು ‘ಚೈನೀಸ್ ವೈರಸ್’ ಎಂದು ಬ್ರ್ಯಾಂಡ್ ಮಾಡುವುದು ಮತ್ತು ಆರಂಭದಲ್ಲೇ ಈ ವೈರಸ್ನ ಬಗ್ಗೆ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡುವಲ್ಲಿ ಚೀನಾ ವಿಫಲವಾಗಿದೆ ಎಂದು ದೂರುತ್ತಿದ್ದು ಇದಕ್ಕೆ ತಿರುಗೇಟು ನೀಡಲು ಚೀನಾ ಭಾರತದ ಸಹಾಯ ಕೋರಿದೆ.
ಕಳೆದ ಮಂಗಳವಾರ ದೂರವಾಣಿ ಮೂಲಕ ಕೊರೊನಾ ಕುರಿತಾಗಿ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ಸಂದರ್ಭದಲ್ಲಿ ಅಮೆರಿಕದ ವಿಚಾರ ಪ್ರಸ್ತಾಪವಾಗಿತ್ತು.
ಅಮೆರಿಕವು ಚೀನಾದ ಮೇಲೆ ಕೊರೊನಾ ಕಳಂಕ ಹೊರಿಸಲು ಯತ್ನಿಸುತ್ತಿರುವುದು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಪೂರಕವಲ್ಲ ಎಂದು ಮಾತುಕತೆ ವೇಳೆ ವಾಂಗ್ ಹೇಳಿದ್ದರು. ಜತೆಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಚೈನೀಸ್ ವೈರಸ್’ ಎಂದಿರುವುದನ್ನು ಭಾರತ ವಿರೋಧಿಸುತ್ತದೆ ಎಂದು ಭಾವಿಸುತ್ತೇನೆ ಎಂದೂ ಹೇಳಿದ್ದರು ಎಂಬುದಾಗಿ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ಜೈಶಂಕರ್ ಕೂಡ ವಾಂಗ್ ಯಿ ಜತೆಗಿನ ಮಾತುಕತೆ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ಚೀನಾ–ಅಮೆರಿಕದ ನಡುವಿನ ವಾಗ್ದಾಳಿಗಳ ಬಗ್ಗೆ ನೇರವಾಗಿ ಪ್ರಸ್ತಾಪ ಮಾಡಿಲ್ಲ.
‘ವಾಂಗ್ ಯಿ ಅವರ ಜತೆ ಕೊರೊನಾ ನಿರ್ಮೂಲನೆಗೆ ಜತೆಯಾಗಿ ಹೋರಾಡುವ ಕುರಿತಾಗಿ ಮಾತುಕತೆ ನಡೆಸಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಜಿ20 ಶೃಂಗಸಭೆ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದಷ್ಟೇ ಅವರು ಟ್ವೀಟ್ ಮಾಡಿದ್ದರು.
ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಅಮೆರಿಕವನ್ನೂ ಸಂಕಷ್ಟಕ್ಕೆ ಈಡುಮಾಡಿದೆ. ಅಮೆರಿಕದಲ್ಲಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಜನ ಕೊರೊನಾ ಪೀಡಿತರಾಗಿದ್ದಾರೆ.
ಇನ್ನು ಕೊರೊನಾ ವೈರಸ್ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಲುವಾಗಿ ಅಮೆರಿಕ 64 ದೇಶಗಳಿಗೆ 174 ದಶಲಕ್ಷ ಡಾಲರ್ ನೆರವು ಘೋಷಿಸಿದೆ. ಭಾರತಕ್ಕೆ ಕೊರೊನಾ ವಿರುದ್ಧ ಹೋರಾಟಕ್ಕೆ 2.9 ದಶಲಕ್ಷ ಡಾಲರ್ ನೆರವನ್ನು ಅಮೆರಿಕ ಘೋಷಿಸಿದೆ.