ವಾಷಿಂಗ್ಟನ್, ಮಾ.28 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯುತ್ತಿರುವ ಮಧ್ಯೆಯೇ ಕೊರೊನಾ ವೈರಸ್ ಪರೀಕ್ಷಿಸಲು ಅಮೆರಿಕ ಮೂಲದ ಲ್ಯಾಬೋರೇಟರಿ ಪೋರ್ಟೇಬಲ್ ಕಿಟ್ವೊಂದನ್ನು ಬಿಡುಗಡೆಗೊಳಿಸಿದೆ. ಯಾರಾದರೂ ಕೊರೊನಾ ಸೋಂಕಿಗೆ ಒಳಗಾಗಿದ್ದರೆ ಈ ಕಿಟ್ ಮೂಲಕ ಸುಲಭವಾಗಿ ಐದು ನಿಮಿಷಗಳಲ್ಲಿ ರಿಸಲ್ಟ್ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಬ್ಬೋಟ್ ಲ್ಯಾಬೋರೇಟರಿಸ್ ಹೇಳಿಕೆ ಪ್ರಕಾರ, ಆರೋಗ್ಯ ಕೇಂದ್ರಗಳಲ್ಲಿ ಮುಂದಿನ ವಾರದಿಂದ ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟೇಷನ್ (ಎಫ್ ಡಿಎ) ಈ ಪೋರ್ಟೇಬಲ್ ಕಿಟ್ ಅನ್ನು ವಿತರಿಸಲು ಅನುಮತಿ ನೀಡಿರುವುದಾಗಿ ತಿಳಿಸಿದೆ.
ಈ ಪೋರ್ಟೇಬಲ್ ಕಿಟ್ ಒಂದು ಸಣ್ಣ ಎಲೆಕ್ಟ್ರಾನಿಕ್ ಉಪಕರಣವಾಗಿದೆ. ಅಣುಸಂಬಂಧಿತ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಈ ಸಾಧನದಲ್ಲಿ ಆರೋಗ್ಯವಂತ ವ್ಯಕ್ತಿಯನ್ನು ಪರೀಕ್ಷಿಸಿದಲ್ಲಿ ಕೇವಲ 13 ನಿಮಿಷಗಳಲ್ಲಿ ನೆಗೆಟಿವ್ ಫಲಿತಾಂಶವನ್ನು ನೀಡಬಲ್ಲದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದು ಒಂದು ಪೋರ್ಟೇಬಲ್ ಸಾಧನವಾಗಿದ್ದು, ಇದನ್ನು ಹೊರಗೆ ಕೊಂಡೊಯ್ಯಬಹುದಾಗಿದೆ. ಈ ಸಾಧನವನ್ನು ವೈರಸ್ ಕೇಂದ್ರ ಸ್ಥಳಗಳಿಗೆ ಕಳುಹಿಸುವ ಸಲುವಾಗಿ ಅಬ್ಬೋಟ್ ಹಾಗೂ ಎಫ್ ಡಿಎ ಜಂಟಿಯಾಗಿ ಕೆಲಸ ಮಾಡುತ್ತಿದೆ.
ಈ ಪೋರ್ಟೇಬಲ್ ಕಿಟ್ ಅನ್ನು ಅಧಿಕೃತವಾಗಿ ಉಪಯೋಗಿಸಲು ಎಫ್ ಡಿಎ ಅನುಮತಿ ಕೊಟ್ಟಿಲ್ಲ. ಈ ಸಾಧನವನ್ನು ಕೇವಲ ಅಧಿಕೃತ ಲ್ಯಾಬ್ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ತುರ್ತಾಗಿ ಬಳಸಲು ಅನುಮತಿ ನೀಡಿರುವುದಾಗಿ ಕಂಪನಿ ಹೇಳಿದೆ.
ಒಂದು ವೇಳೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ ಈ ಪೋರ್ಟೇಬಲ್ ಕಿಟ್ ಐದು ನಿಮಿಷಗಳಲ್ಲಿ ಫಲಿತಾಂಶ ನೀಡಲಿದ್ದು, ಇದರಿಂದ ವೈರಸ್ ಇದ್ದ ವ್ಯಕ್ತಿಗಳನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ ಎಂಬುದಾಗಿ ಅಬ್ಬೋಟ್ ಅಧ್ಯಕ್ಷ ರೋಬರ್ಟ್ ಫೋರ್ಡ್ ತಿಳಿಸಿದ್ದಾರೆ.