ಮ್ಯಾಡ್ರಿಡ್, ಮಾ.29 (DaijiworldNews/PY) : ಸ್ಪೇನ್ ರಾಣಿ ಮಾರಿಯಾ ಟೆರೇಸಾ (86ವರ್ಷ) ಅವರು ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ಇದರೊಂದಿಗೆ ಕೊರೊನಾಗೆ ಸಂಬಂಧಿಸಿದಂತೆ ರಾಜಮನೆತನದ ಮೊದಲು ಸಾವು ಸಂಭವಿಸಿದಂತಾಗಿದೆ.
ಪ್ರಿನ್ಸ್ ಸಿಕ್ಸ್ ಟೋ ಎನ್ರಿಕ್ ಡೇ ಬೋರ್ಬೊನ್ ಅವರು ರಾಣಿ ಮಾರಿಯಾ ನಿಧನದ ಸುದ್ದಿಯನ್ನು ಫೇಸ್ಬುಕ್ನಲ್ಲಿ ಖಚಿತಪಡಿಸಿದ್ದಾರೆ. ಕೊರೊನಾ ಸೋಂಕಿನಿಂದಾಗಿ ರಾಣಿ ಟೆರೇಸಾ ಅವರು ಮೃತಪಟ್ಟಿರುವುದಾಗಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ ಶುಕ್ರವಾರ ರಾಣಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಸಹೋದರ ಡಾನ್ ಸಿಕ್ಟೋ ಎನ್ರಿಕ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಸಹೋದರಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದ್ದಾರೆ.
1933ರಂದು ಪ್ಯಾರೀಸ್ನಲ್ಲಿ ಪ್ರಿನ್ಸೆಸ್ ಮಾರಿಯಾ ಟೆರೇಸಾ ಜನಿಸಿದ್ದರು. ಫ್ರಾನ್ಸ್ನಲ್ಲಿ ತಮ್ಮ ಶಿಕ್ಷಣ ಅಭ್ಯಾಸವನ್ನು ಪೂರ್ಣಗೊಳಿಸಿದ್ದ ಅವರು ಬಳಿಕ ಪ್ಯಾರೀಸ್ನ ಸೋರ್ ಬೋನ್ನೆ ಹಾಗೂ ಮ್ಯಾಡ್ರಿಡ್ ಯೂನಿವರ್ಸಿಟಿಯಲ್ಲಿ ಪೋಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ರೆಡ್ ಪ್ರಿನ್ಸೆಸ್ ಎಂದೇ ರಾಣಿ ಮಾರಿಯಾ ಟೆರೇಸಾ ಅವರು ಖ್ಯಾತರಾಗಿದ್ದರು. ಈ ಬಿರುದನ್ನು ರಾಣಿ ಮಾರಿಯಾ ಅವರಿಗೆ ಮಾಧ್ಯಮಗಳು, ಯಾವುದನ್ನೂ ಮುಚ್ಚುಮರೆ ಇಲ್ಲದೇ ನೇರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ನೀಡಿದ್ದರು.
ರಾಣಿ ಅವರು ಹಲವಾರು ಸಂಬಂಧಿಗಳನ್ನು, ಸಹೋದರನನ್ನು ಅಗಲಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ಮಾರಣಾಂತಿಕ ಕೊರೊನಾ ವೈರಸ್ಗೆ ಸ್ಪೇನ್ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,400ಕ್ಕೆ ಏರಿದೆ. ಅಲ್ಲದೇ ಸ್ಪೇನ್ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.