ಲಂಡನ್, ಮಾ.29 (DaijiworldNews/PY) : ಶ್ವಾನಗಳಿಗೆ ವಾಸನೆ ಗ್ರಹಿಸಿ ಕಳ್ಳರನ್ನು ಹಿಡಿಯುವ ವಿಶೇಷ ಸಾಮರ್ಥ್ಯವಿದ್ದು, ಇದರೊಂದಿಗೆ ಕೊರೊನಾ ವೈರಸ್ ಸೋಂಕಿತರನ್ನು ಈ ಪತ್ತೆ ಹಚ್ಚಬಹುದೇ ಎಂಬ ಪ್ರಶ್ನೆಗೆ ಇಂಗ್ಲೆಂಡ್ನ ವಿಜ್ಞಾನಿಗಳು ಉತ್ತರ ಹುಡುಕುತ್ತಿದ್ದಾರೆ.
ಇಂಥದೊಂದು ಪ್ರಯತ್ನಕ್ಕೆ ಮೆಡಿಕಲ್ ಡಿಟೆಕ್ಷನ್ ಡಾಗ್ಸ್ (ಎಂಡಿಡಿ), ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ ಮತ್ತು ಡುರ್ಹಾಮ್ ವಿ.ವಿ. ಸಹಯೋಗದಲ್ಲಿ ಮುಂದಾಗಿದೆ. ಇದೀಗ ಕೊರೊನಾ ವೈರಸ್ ಸೋಂಕಿತರ ಪತ್ತೆಗೆ ಇದರ ಆಧಾರದಲ್ಲೇ ಶ್ವಾನ ಪಡೆ ನೆರವಾಗಬಲ್ಲದೇ ಎಂಬ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ.
ಆರು ವಾರಗಳ ಕಾಲ ಶ್ವಾನಗಳಿಗೆ ತರಬೇತಿ ನೀಡುವ ಆಲೋಚನೆಯಿದ್ದು, ಈ ಸಂಬಂಧ ಅಗತ್ಯ ಸಿದ್ದತೆ ನಡೆಯುತ್ತಿದೆ. ಒಂದು ವೇಳೆ ಈ ಪ್ರಯೋಗ ಸಫಲವಾದರೆ, ತ್ವರಿತ ರೋಗ ಪತ್ತೆ ಸಾಧ್ಯವಾಗಲಿದೆ. ಶ್ವಾನಗಳನ್ನು ಈ ಹಿಂದೆ ಕ್ಯಾನ್ಸರ್, ಪಾರ್ಕಿನ್ಸನ್ ರೋಗಿಗಳ ಪತ್ತೆಗೆ ಯಶಸ್ವಿಯಾಗಿ ತರಬೇತುಗೊಳಿಸಿರುವ ದತ್ತಿ ಸಂಸ್ಥೆಯೇ ಇದೀಗ ಕೊರೊನಾ ವೈರಸ್ ಸೋಂಕಿತರ ಪತ್ತೆ ಕಾರ್ಯದಲ್ಲಿ ಮುಂದಾಗಿದ್ದು, ಶ್ವಾನಗಳಿಗೂ ತರಬೇತಿ ನೀಡಲಿದೆ ಎಂದು ಎಂಡಿಡಿ ತಿಳಿಸಿದೆ.