ವಾಷಿಂಗ್ಟನ್, ಮಾ 31 (Daijiworld News/MSP): ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರ ಸಂಖ್ಯೆ ಸದ್ಯ ಇಟಲಿ, ಸ್ಪೈನ್ ಮತ್ತು ಚೀನಾ ಆಗಿದ್ದರೆ ನಾಲ್ಕನೇ ಸ್ಥಾನದಲ್ಲಿ ಅಮೆರಿಕಾವಿದೆ. ಯುರೋಪ್ ಖಂಡದಲ್ಲಿ ಇದುವರೆಗೆ ಅತ್ಯಂತ ಹೆಚ್ಚು ಸಾವು ಸಂಭವಿಸಿದೆ. ಇನ್ನು ಇಂದೇ ದಿನ ಅಮೇರಿಕಾದಲ್ಲಿ ಕೊರೊನಾಗೆ 500ಕ್ಕೂ ಹೆಚ್ಚು ಸೋಂಕು ಸಂಭವಿಸಿದೆ.
ಕೊರೊನಾ ಸಾಂಕ್ರಮಿಕ ರೋಗವೂ ಜನರ ಬದುಕನ್ನೇ ಬುಡಮೇಲು ಮಾಡುವುದಲ್ಲದೆ , ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನಕ್ಕೆ ತಳ್ಳಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ.
ಕೊರೊನಾ ವೈರಸ್ ಅನಿಯಂತ್ರಿತ ಹರಡುವಿಕೆ ಜಾಗತಿಕ ಮಟ್ಟದಲ್ಲಿ ಆಘಾತವನ್ನುಂಟು ಮಾಡಿದೆ. ಇದು ಪೀಡಿತ ದೇಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಮಾತ್ರವಲ್ಲದೆ ಬಡತನಕ್ಕೆ ಜನರನ್ನು ನೂಕುತ್ತದೆ ಎಂದು ಪೂರ್ವ ಏಷ್ಯಾದ ವಿಶ್ವ ಬ್ಯಾಂಕ್ ನ ಮುಖ್ಯ ಆರ್ಥಿಕ ತಜ್ಞ ಆದಿತ್ಯ ಮಟ್ಟೂ ತಿಳಿಸಿದ್ದಾರೆ.
ಎಂತಹ ಅತ್ಯುತ್ತಮ ಪರಿಸ್ಥಿತಿಯಲ್ಲಿಯೂ ಸಹ, ದೇಶಗಳು ಬೆಳವಣಿಗೆಯಲ್ಲಿ ತೀವ್ರ ಕುಸಿತವನ್ನು ಕಾಣಲಿವೆ. ಚೀನಾದ ವಿಸ್ತರಣೆಯು 2019 ರಲ್ಲಿ 6.1 ಪ್ರತಿಶತದಿಂದ 2.3 ಪ್ರತಿಶತಕ್ಕೆ ಕುಂಠಿತವಾಗಲಿದೆ ಎಂದು ವರದಿಯೊಂದು ತಿಳಿಸಿದೆ.