ವಾಷಿಂಗ್ಟನ್, ಎ.01 (DaijiworldNews/PY) : ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿರುವುದರಿಂದ ಅಮೆರಿಕ ತತ್ತರಿಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳವಾರ ಅಮೆರಿಕದಲ್ಲಿ ಒಂದೇ ದಿನ ಕೊರೊನಾ ಸೋಂಕಿಗೆ 865 ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ ಸುಮಾರು 8:30ರ ವರೆಗೂ ಮೃತಪಟ್ಟವರ ಸಂಖ್ಯೆ ಒಟ್ಟು 3,873 ಮುಟ್ಟಿದ್ದು, ಇಟಲಿ, ಸ್ಪೇನ್, ಚೀನಾ ಎಲ್ಲ ರಾಷ್ಟ್ರಗಳಿಗಿಂತಲೂ ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದೆ. ಒಟ್ಟು ಪ್ರಕರಣಗಳು 1,88,172 ಗಡಿ ದಾಟಿದೆ.
ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು ಎಂದು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ 2,40,000 ಅಮೆರಿಕನ್ನರು ಬಲಿಯಾಗಬಹುದೆಂದು ಶ್ವೇತ ಭವನ ಅಂದಾಜಿಸಿದೆ.
ಸಾಂಕ್ರಾಮಿಕವಾಗಿರುವ ಕೊರೊನಾ ವೈರಸ್ ಸೋಂಕನ್ನು ಟ್ರಂಪ್ ಪ್ಲೇಗ್ಗೆ ಹೋಲಿಕೆ ಮಾಡಿದ್ದಾರೆ. ಮುಂಬರಲಿರುವ ಕಠಿಣ ಸಂದರ್ಭಗಳಿಗೆ ಅಮೆರಿಕನ್ನರು ಸಿದ್ದರಾಗಿರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಯಾವುದೇ ಮಾಂತ್ರಿಕ ಔಷಧಿ ಅಥವಾ ಚಿಕಿತ್ಸೆ ಕೊರೊನಾ ವೈರಸ್ ಸೋಂಕು ತಡೆಗೆ ಇಲ್ಲ. ನೀವು ನಡೆದುಕೊಳ್ಳುವ ರೀತಿಯ ಮೇಲೆ ಎಲ್ಲವೂ ಅವಲಂಭಿತವಾಗಿದೆ. ಪ್ರತಿಯೊಬ್ಬರ ನಡವಳಿಕೆಯೂ ಮುಂದಿನ 30 ದಿನಗಳ ವರೆಗೂ ಸಾಂಕ್ರಾಮಿಕ ವೈರಸ್ನ ವ್ಯಾಪಿಸುವಿಕೆಯನ್ನು ಬದಲಿಸುತ್ತದೆ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.
ಕೊರೊನಾ ನಿಯಂತ್ರಿಸಲು ಆಡಳಿತ ಎಲ್ಲಾ ರೀತಿಯಾದ ಪ್ರಯತ್ನದಲ್ಲಿದೆ. ಸೋಂಕು ವ್ಯಾಪಿಸುವುದು ಇದೇ ರೀತಿಯಾಗಿ ಮುಂದುವರೆದರೆ 1,00,000 ದಿಂದ 2,40,000 ಜನರು ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿ ಆಂಥೊನಿ ಫೌಸಿ ಎಚ್ಚರಿಕೆ ನೀಡಿದ್ದಾರೆ.