ಜೋಹಾನ್ಸ್ ಬರ್ಗ್, ಎ.01 (DaijiworldNews/PY) : ಭಾರತೀಯ ಮೂಲದ ಸೂಕ್ಷ್ಮಾಣು ತಜ್ಞೆ ಗೀತಾ ರಾಮ್ ಜೀ ಅವರು ಮಹಾಮಾರಿ ಕೊರೊನಾ ವೈರಸ್ಗೆ ದಕ್ಷಿಣ ಆಫಿಕ್ರಾದಲ್ಲಿ ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದೆ.
ಗೀತಾ ರಾಮ್ ಜೀ (64)ಅವರು ಲಸಿಕೆ ವಿಜ್ಞಾನಿ ಮತ್ತು ಎಚ್ ಐವಿ ತಡೆ ಸಂಶೋಧಕಿಯಾಗಿದ್ದು ಲಂಡನ್ನಿಂದ ವಾರದ ಹಿಂದೆ ವಾಪಾಸ್ಸಾಗಿದ್ದು, ಇವರಿಗೆ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಗೀತಾ ರಾಮ್ ಜೀ ಅವರು ದಕ್ಷಿಣ ಆಫ್ರಿಕಾದ ಎಚ್ ಐವಿ ತಡೆ ಸಂಶೋಧನಾ ಘಟಕದ ನಿರ್ದೇಶಕಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರೊ.ಗೀತಾ ರಾಮ್ ಜೀ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಇದು ಒಂದು ನೋವಿನ ಸಂಗತಿ ಎಂದು ಎಂದು ಎಸ್ ಎಎಂ ಆರ್ ಸಿ ಅಧ್ಯಕ್ಷ, ಸಿಇಒ ಗ್ಲೆಂಡಾ ಗ್ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೊ.ರಾಮ್ ಜೀ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ಹೇಳಿದರು.
2018ರಲ್ಲಿ ನೂತನವಾಗಿ ಎಚ್ ಐವಿ ತಡೆಗಾಗಿ ಕಂಡುಹಿಡಿದ ಪದ್ಧತಿಗೆ ಪ್ರೊ.ರಾಮ್ ಜೀಗೆ ಲಿಸ್ಬನ್ ನಲ್ಲಿ ವಿಶಿಷ್ಟ ಮಹಿಳಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ರಾಮ್ ಜೀ ಅವರು ಭಾರತೀಯ ಮೂಲದ ಪ್ರವೀಣ್ ರಾಮ್ ಜೀ ಅವರೊಂದಿಗೆ ವಿವಾಹವಾಗಿದ್ದರು.