ಜಿನೇವಾ, ಎ.02 (Daijiworld News/MB) : ಅಮೆರಿಕದಲ್ಲಿ ಬುಧವಾರ 884 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,000 ದಾಟಿದೆ. ಈವರೆಗೆ 2,13,713 ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಮಂಗಳವಾರ 865 ಮಂದಿ ಈ ಸೋಂಕಿಗೆ ಬಲಿಯಾಗಿದ್ದರು.
ಕೊರೊನಾ ಕುರಿತಾಗಿ ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್, "ಇನ್ನು ಕೆಲವು ದಿನಗಳಲ್ಲಿ ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷಕ್ಕೆ ತಲುಪುವ ಸಾಧ್ಯತೆ ಇದ್ದು ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಹಾಗೂ ಜಾಗತಿಕವಾಗಿ ಸೋಂಕು ವ್ಯಾಪಿಸುತ್ತಿರುವುದು ತೀವ್ರ ಕಳವಳ ಉಂಟು ಮಾಡಿದೆ" ಎಂದು ಹೇಳಿದ್ದಾರೆ.
"ಸೋಂಕು ದೃಢಪಡುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ ಕಳೆದ ಐದು ವಾರಗಳಲ್ಲಿ ಏರಿಕೆಯಾಗುತ್ತಿದ್ದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಗತಿಕವಾಗಿ ಕೊರೊನಾ ಪ್ರಕರಣಗಳು 10 ಲಕ್ಷ ಮುಟ್ಟಲಿವೆ ಹಾಗೂ ಸಾವಿಗೀಡಾಗುವವರ ಸಂಖ್ಯೆ 50,000ಕ್ಕೆ ಏರಿಕೆಯಾಗಲಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜಗತ್ತಿನಾದ್ಯಂತ 9,39,181 ದಷ್ಟು ಕೊರೊನಾ ಪ್ರಕರಣಗಳು ದೃಡಪಟ್ಟಿದ್ದು ಸೋಂಕಿನಿಂದಾಗಿ 47,118 ಮಂದಿ ಸಾವಿಗೀಡಾಗಿದ್ದಾರೆ. ಚಿಕಿತ್ಸೆಯ ಬಳಿಕ 1,90,816 ಜನರು ಗುಣಮುಖರಾಗಿದ್ದಾರೆ. ಚೇತರಿಕೆ ಕಂಡಿರುವವರ ಪ್ರಮಾಣ ಶೇ 20ರಷ್ಟಿದೆ.
ಇಟಲಿ, ಸ್ಪೇನ್, ಚೀನಾ ಎಲ್ಲ ರಾಷ್ಟ್ರಗಳಿಗಿಂತಲೂ ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದ್ದು, ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಅಮೆರಿಕನ್ನರಿಗೆ ಎಲ್ಲದಕ್ಕೂ ಸಿದ್ಧವಿರುವಂತೆ ಕರೆ ನೀಡಿದ್ದಾರೆ.
ಈ ಕೊರೊನಾ ಮಹಾಮಾರಿಗೆ 2,40,000 ಅಮೆರಿಕನ್ನರು ಬಲಿಯಾಗಬಹುದು ಎಂದು ಶ್ವೇತ ಭವನ ಅಂದಾಜು ಮಾಡಿದೆ.
ಇನ್ನು ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು, ಅದರಿಂದ ಸಾವಿಗೀಡಾದವರ ಸಂಖ್ಯೆಯ ಲೆಕ್ಕದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದು "ಅದು ಸರಿಯಾದ ಲೆಕ್ಕ ಎಂದು ನಮಗೆ ಹೇಗೆ ತಿಳಿಯುತ್ತದೆ" ಎಂದು ಹೇಳಿದ್ದಾರೆ.