ನ್ಯೂಯಾರ್ಕ್, ಏ 2 (Daijiworld News/MSP): ಕೊರೊನಾ ವೈರಸ್ ತನ್ನ ರುದ್ರನರ್ತನ ಮುಂದುವರಿಸಿದ್ದು, ವೃದ್ದರಿಂದ ಹಿಡಿದು ನವಜಾತ ಶಿಶುವನ್ನು ಬಲಿಪಡೆದುಕೊಳ್ಳುತ್ತಿದೆ.
ಇದೀಗ ಮಾರಣಾಂತಿಕ ಕೋವಿಡ್ 19 ಸೋಂಕಿಗೆ ಆರು ವಾರದ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಜಗತ್ತಿನಲ್ಲಿ ಮೃತಪಟ್ಟ ಅತೀ ಕಿರಿಯ ವಯಸ್ಸಿನ ಮಗು ಇದಾಗಿದೆ.
ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ಈ ಘಟನೆ ನಡೆದಿದ್ದು, ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎಂದು ಗವರ್ನರ್ ನೆಡ್ ಲ್ಯಾಮೋಂಟ್ ಸ್ಪಷ್ಟಪಡಿಸಿದ್ದಾರೆ.
ಇದೊಂದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ. ಕಳೆದ ವಾರವಷ್ಟೇ ಒಂದು ವರ್ಷದ ಮಗು ಸಾವನ್ನಪ್ಪಿತ್ತು. ಕೋವಿಡ್ 19 ಸೋಂಕಿಗೆ ಬಲಿಯಾಗಿರುವ ಮೊದಲ ನವಜಾತ ಶಿಶು ಇದಾಗಿದೆ.