ನೆದರ್ಲ್ಯಾಂಡ್, ಎ.02 (Daijiworld News/MB) : ನೆದರ್ಲ್ಯಾಂಡ್ನಲ್ಲಿ 101ನೇ ವರ್ಷದ ಅಜ್ಜಿ ಜಗತ್ತಿನಾದ್ಯಂತ ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಿ ಜಯಗಳಿಸಿದ್ದು ವೈದ್ಯರು ಕೂಡಾ ಆಶ್ಚರ್ಯ ಚಕಿತರಾಗಿದ್ದಾರೆ.
ಹಾಗೆಯೇ ಈ ಅಜ್ಜಿಯ ಸ್ವಾರಸ್ಯಕರ ವಿಷಯವೇನೆಂದರೆ ಈ ಅಜ್ಜಿ ಜನಿಸಿದ್ದು 1919ರಲ್ಲಿ ಸ್ಪೇನ್ ಫ್ಲೂ ವ್ಯಾಪಕವಾಗಿದ್ದ ಸಂದರ್ಭದಲ್ಲಿಯಾಗಿದ್ದು ಮನೆಯಲ್ಲಿ ಒಬ್ಬಳೇ ಇದ್ದಳಂತೆ.
ಕೊರೊನಾದಿಂದಾಗಿ ಹೆಚ್ಚಾಗಿ ವಯಸ್ಸಾದವರೆ ಮೃತಪಟ್ಟಿರುವ ಸಂದರ್ಭದಲ್ಲಿ 101 ವರ್ಷದ ತನಗೆ ಕೊರೊನಾ ಇದೆ ಎಂದು ತಿಳಿದ ಈ ಅಜ್ಜಿ ಭಯಪಡದೆಯೇ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲದೇ ವೈದ್ಯರ ಚಿಕಿತ್ಸೆಗೆ ಚೆನ್ನಾಗಿಯೇ ಸ್ಪಂದಿಸುತ್ತಿದ್ದಳು ಎಂದು ವರದಿ ತಿಳಿಸಿದೆ.
ಅಜ್ಜಿಗೆ ಒಂದು ವಾರದಿಂದ ಉಸಿರಾಟದ ಸಮಸ್ಯೆ ಉಂಟಾಗಿದ್ದು ಆ ನಂತರ ಕೊರೊನಾ ಇರುವುದು ದೃಢಪಟ್ಟಿದೆ. ಈ ಅಜ್ಜಿ ಐಸೋಲೇಷನ್ ವಾರ್ಡ್ನಲ್ಲೂ ಚುರುಕಾಗಿದ್ದು ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳೂ ಕಂಡು ಬಂದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಆಕೆ ಮನೆಯಲ್ಲಿ ಒಂಟಿಯಾಗಿ ಜೀಸುತ್ತಿದ್ದದ್ದು ಆಗಿರಬಹುದು ಎಂದು ಹೇಳಲಾಗಿದೆ.
ಅಜ್ಜಿ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು ಆಸ್ಪತ್ರೆಯಲ್ಲಿ ಸಾಕಷ್ಟು ವಿಶ್ರಾಂತಿ ಪಡೆದು ಈಗ ಮನೆಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
ಭಾರತೀಯ ಮೂಲದ ವೈದ್ಯ ಸುನಿಲ್ ರಾಮಲಾಲ್ ಎಂಬವರು ಈ ಅಜ್ಜಿಯನ್ನು ನೋಡಿಕೊಂಡಿದ್ದು, ಈ ಅಜ್ಜಿಯನ್ನು ನೋಡಿ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.
ಈ ಅಜ್ಜಿಗೆ ಯಾವುದೇ ಭಯವಿಲ್ಲ. ಹೇಳಿದ ಎಲ್ಲವನ್ನೂ ಪಾಲಿಸುತ್ತಿದ್ದರು. ಆಕೆ ಸೀನುವ ಸಂದರ್ಭದಲ್ಲಿ ವೈದ್ಯರು, ದಾದಿಯರು ಹತ್ತಿರದ್ದಲ್ಲಿ ಇದ್ದಲ್ಲಿ ಅವರನ್ನು ದೂರ ಹೋಗಲು, ತಮ್ಮನ್ನು ತಾವು ರಕ್ಷಣೆ ಮಾಡಲು ಹೇಳುತ್ತಿದ್ದಳು ಎಂದು ಹೇಳಿದ್ದಾರೆ.