ವಾಷಿಂಗ್ಟನ್, ಎ.03 (DaijiworldNews/PY) : ನಾನು ವೈಟ್ಹೌಸ್ನಲ್ಲಿ ಎರಡನೇ ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಪರೀಕ್ಷೆಯಲ್ಲಿ ಮತ್ತೊಮ್ಮೆ ನೆಗೆಟಿವ್ ವರದಿ ಬಂದಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿರಂಗಪಡಿಸಿದ್ದು, ಕೊರೊನಾ ಕುರಿತು ವೈಟ್ಹೌಸ್ನಲ್ಲಿ ದೈನಂದಿನ ಮಾಹಿತಿ ನೀಡುವ ಸಂದರ್ಭ ಈ ಬಗ್ಗೆ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಎರಡನೇ ಕೊರೊನಾ ಪರೀಕ್ಷೆ ಕೂಡಾ ನೆಗೆಟಿವ್ ಆಗಿದೆ ಎಂದು ಹೇಳಿದರು.
ಟ್ರಂಪ್ ಅವರು ಕೊರೊನಾ ಭೀತಿ ಕಾಣಿಸಿಕೊಂಡ ನಂತರ ಎರಡನೇ ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಈ ಬಾರಿ ಅವರು ಹೊಸ ರ್ಯಾಪಿಡ್ ಪದ್ದತಿಯನ್ನು ಉಪಯೋಗಿಸಿದ್ದರು. ಕೊರೊನಾ ಪರೀಕ್ಷೆಯನ್ನು ನಾನು ಕೆಲವೇ ನಿಮಿಷದಲ್ಲಿ ಪೂರ್ಣಗೊಳಿಸಿದ್ದೆ. 15 ನಿಮಿಷಗಳಲ್ಲಿ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶ ತಿಳಿಯಿತು. ಇದು ಎಷ್ಟು ಬೇಗ ಕೆಲಸ ಮಾಡಲಿದೆ ಎನ್ನುವುದರ ಬಗ್ಗೆ ಕುತೂಹಲವಿತ್ತು. ಕೊರೊನಾ ಪರೀಕ್ಷೆಗೆ ನಾನು ಎರಡನೇ ಬಾರಿ ಒಳಗಾಗಿದ್ದು, ಎರಡನೇ ಪರೀಕ್ಷೆ ಹೆಚ್ಚು ಸಂತೃಪ್ತಿ ನೀಡಿದೆ ಎಂದು ತಿಳಿಸಿದ್ದಾರೆ.
ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಟ್ರಂಪ್ ಅವರು ಮೊದಲ ಪರೀಕ್ಷೆಗೆ ಒಳಗಾಗಿದ್ದರೆಉ. ಪರೀಕ್ಷೆ ನಡೆದ ಒಂದು ಗಂಟೆಯ ನಂತರ ಫಲಿತಾಂಶ ಬಂದಿತ್ತು. ಆರಂಭದಲ್ಲಿ ಟ್ರಂಪ್ ಅವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ಆರ್ಥಿಕತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.