ರೋಮ್, ಎ.03 (DaijiworldNews/PY) : ಜಗತ್ತಿನಾದ್ಯಂತ ಕೊರೊನಾ ವೈರಸ್ ಎಲ್ಲರನ್ನೂ ಭೀತಿಗೊಳಿಸಿದೆ. ಇದೀಗ ಅದೇ ಭಯದಲ್ಲಿ ತನಗೆ ಕೊರೊನಾ ವೈರಸ್ ಹರಡಿದ್ದಾಳೆ ಎಂದು ತನ್ನ ವೈದ್ಯೆ ಗೆಳತಿಯನ್ನು ನರ್ಸ್ ಒಬ್ಬ ಹತ್ಯೆ ಮಾಡಿರುವ ಘಟನೆ ಇಟಲಿಯಲ್ಲಿ ನಡೆದಿದೆ.
ಲೊರೆನಾ ಕ್ವಾರಂಟಾ (27) ಕೊಲೆಯಾದ ವೈದ್ಯೆ ವಿದ್ಯಾರ್ಥಿ. ಈಕೆಯ ಪ್ರಿಯಕರ ಆಂಟೋನಿಯೊ ಡಿ ಪೇಸ್ ಹತ್ಯೆ ಮಾಡಿದ್ದಾನೆ.
ಸಿಸಿಲಿಯ ಮೆಸ್ಸಿನಾದಲ್ಲಿರುವ ಆಸ್ಪತ್ರೆಯಲ್ಲಿ ಮೃತ ಲೊರೆನಾ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಆಸ್ಪತ್ರೆಯಲ್ಲಿ ಆರೋಪಿ ಡಿ ಪೇಸ್ ಕೂಡ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಗತ್ತಿನಾದ್ಯಂತ ಕೊರೊನಾ ಹರಡುತ್ತಿರುವುದರಿಂದ ವೈದ್ಯೆ ಲೊರೆಲಾ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಳು.
ಇತ್ತೀಚೆಗೆ ಆರೋಪಿ ಡಿ ಪೇಸ್ ಅನಾರೋಗ್ಯದಿಂದ ಬಳಲುತ್ತಿದ್ದನು. ಇದರಿಂದ ಗಾಬರಿಯಾದ ಆತ ತನ್ನ ಗೆಳತಿ ತನಗೆ ಕೊರೊನಾ ಸೋಂಕು ಹರಡಿದ್ದಾಳೆ ಎಂದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ಡಿ ಪೇಸ್ ಲೊರೆಲಾ ನಿದ್ರೆ ಮಾಡುತ್ತಿದ್ದ ಸಂದರ್ಭ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಚಾಕುವಿನಿಂದ ಕೈ ಕಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪೊಲೀಸರಿಗೆ ಡಿ ಪೇಸ್ ಫೋನ್ ಮಾಡಿ ತಾನು ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಡಿ ಪೇಸ್ ಕೈಯನ್ನು ಕಟ್ ಮಾಡಿಕೊಂಡಿದ್ದನ್ನು ನೋಡಿದ್ದು, ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಲೊರೆನಾಳ ಸಹೋದ್ಯೋಗಿಗಳು ಆರೋಪಿಗಳ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಆದರೆ ಅಷ್ಟರಲ್ಲೇ ಲೊರೆನಾ ಸಾವನ್ನಪ್ಪಿದ್ದಳು.
ಇತ್ತ ಪೊಲೀಸರು ಡಿ ಪೇಸ್ ಅನ್ನು ವಿಚಾರಣೆ ಮಾಡಿದ್ದು, ವಿಚಾರಣೆ ಸಂದರ್ಭ ಅತ ಲೊರೆನಾ ನನಗೆ ಕೊರೊನಾ ವೈರಸ್ ಸೋಂಕು ಹರಡಿಸಿದ್ದಳು. ಅದಕ್ಕಾಗಿ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ. ಆತನ ಹೇಳಿಕೆಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಇಬ್ಬರ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಆದರೆ, ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲೊರೆನಾ ಕೊರೊನಾ ಬಗ್ಗೆ ಪೋಸ್ಟ್ವೊಂದನ್ನು ಮಾಡಿದ್ದಳು. ನೀವು, ನಿಮ್ಮ ನಿಮ್ಮ ಕುಟುಂಬಗಳ ಬಗ್ಗೆ ಹಾಗೂ ದೇಶದ ಬಗ್ಗೆ ಗೌರವವನ್ನು ತೋರಿಸಬೇಕು. ನಿಮಗಾಗಿ ಪ್ರತಿದಿನ ತನ್ನ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುವವರ ಬಗ್ಗೆ ಯೋಚಿಸಬೇಕು. ಹಾಗಾಗಿ ನೀವು ಮನೆಯಲ್ಲಿಯೇ ಇರಬೇಕು. ಹೊರಗಡೆ ಬರಬೇಡಿ ಎಂದು ಬರೆದಿದ್ದಳು.
ಮೃತ ಲೊರೆನಾ ಸಿಸಿಲಿಯ ಫವಾರಾ ಮೂಲದವಳಾಗಿದ್ದು, ಮೆಸ್ಸಿನಾದಲ್ಲಿ ಕಳೆದ ಕಲೆವು ತಿಂಗಳುಗಳಿಂದ ಒಟ್ಟಿಗೆ ವಾಸವಾಗಿದ್ದರು. ಲೊರೆನಾ ಅವರಿಗೆ ವೈದ್ಯಕೀಯ ಪದವಿಯನ್ನು ಮರಣೋತ್ತರವಾಗಿ ಗೌರವಯುತವಾಗಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.