ವಾಷಿಂಗ್ಟನ್, ಎ.05 (DaijiworldNews/PY) : ಕೊರೊನಾದಿಂದ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿರುವ ಕಾರಣ ಅತ್ಯಂತ ಕಠಿಣ ವಾರಗಳತ್ತ ಯುಎಸ್ ಹೆಜ್ಜೆ ಹಾಕುತ್ತಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೂ ಒಂದು ವಾರ ಹಾಗೂ ಮುಂದಿನ ವಾರಗಳಲ್ಲಿ ಸಾಕಷ್ಟು ಸಾವು ಸಂಭವಿಸಬಹುದು, ಅಲ್ಲದೇ, ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಅಮೆರಿಕದಲ್ಲಿ 3 ಲಕ್ಷಕ್ಕಿಂತ ಅಧಿಕ ಜನರು ಕೊರೊನಾ ವೈರಸ್ಗೆ ತುತ್ತಾಗಿದ್ದು, ಮೃತಪಟ್ಟವರ ಸಂಖ್ಯೆ ಕೂಡಾ 8 ಸಾವಿರಕ್ಕೇರಿದೆ. 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ 2ರಿಂದ 3 ಪಟ್ಟು ಅಧಿಕವಾಗಿದೆ.
ಅಮೆರಿಕದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರದ ಆದೇಶವನ್ನು ಹಲವು ಕಂಪೆನಿಗಳು ಪಾಲನೆ ಮಾಡುತ್ತಿಲ್ಲ. ಅಗತ್ಯ ವಸ್ತುಗಳ ಸರಬರಾಜು ನಿಲ್ಲಿಸಿದ ಕಾರಣ ಅತೀ ಹೆಚ್ಚು ಜನರು ಸಾವನ್ನಪ್ಪುವಂತಾಯಿತು ಎಂದು ತಿಳಿಸಿದರು.