ನವದೆಹಲಿ, ಎ.05 (DaijiworldNews/PY) : ವಿಶ್ವದ 190 ರಾಷ್ಟ್ರಗಳನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ವಿರುದ್ದದ ಹೋರಾಟಕ್ಕೆ ಪಾಕಿಸ್ತಾನ ಕೂಡಾ ತಲೆಬಾಗಿದ್ದು, ಭಾರತದ ಈ ಹೋರಾಟಕ್ಕೆ ಪ್ರೌಡ್ ಆಫ್ ಯೂ ಎಂದು ಶ್ಲಾಘನೆ ವ್ಯಕ್ತಪಡಿಸಿದೆ.
ಕೊರೊನಾ ವೈರಸ್ ವಿರುದ್ದದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ವಿವಿಧ ದೇಶಗಳಿಗೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಗಳನ್ನು ಬಳಕೆ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದೆ. ದೊಡ್ಡಣ್ಣ ಅಮೆರಿಕ, ಚೀನಾ, ಇಂಗ್ಲೆಂಡ್, ರಷ್ಯಾ ಸೇರಿದಂತೆ ವಿವಿಧ ದೇಶಗಳು ಭಾರತದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಭಾರತಕ್ಕೆ ಕೊರೊನಾ ವಿರುದ್ದದ ಹೋರಾಟದಲ್ಲಿ ಅಗತ್ಯ ಬಿದ್ದರೆ ಯಾವುದೇ ರೀತಿಯಾದ ನೆರವು ನೀಡಲೂ ಸಿದ್ದ ಎಂದು ತಿಳಿಸಿವೆ.
ಈ ಪಟ್ಟಿಗರ ಪಾಕಿಸ್ತಾನ ಕೂಡಾ ಸೇರಿದ್ದು, ಏರ್ ಇಂಡಿಯಾ ಕಾರ್ಯವನ್ನು ಶ್ಲಾಘಿಸಿದೆ. ಭಾರತದಿಂದ ಎ.2ರಂದು ಕೊರೊನಾ ವೈರಸ್ ವೈದ್ಯಕೀಯ ಪರಿಕರಗಳನ್ನು ಹಾಗೂ ಲಾಕ್ಡೌನ್ ವೇಳೆಯಲ್ಲಿ ಭಾರತದಲ್ಲಿ ನಿರಾಶ್ರಿತರಾಗಿದ್ದ ಕೆಲವು ಯುರೋಪಿಯನ್ ನಾಗರಿಕರನ್ನು ಹೊತ್ತು ಮುಂಬೈನಿಂದ ಜರ್ಮನಿಯ ಫ್ರಾಂಕ್ಫರ್ಟ್ ನತ್ತ ಸಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಾಕಿಸ್ತಾನ ತನ್ನ ವಾ ಯುಗಡಿ ತೆರದಿತ್ತು. ಪಾಕ್ ವಾಯುಗಡಿ ಮೂಲಕ ತೆರಳಿದರೆ ಕಡಿಮೆ ಸಮಯದ ಅಂತರದಲ್ಲಿ ಫ್ರಾಂಕ್ಫರ್ಟ್ ಗೆ ತೆರಳಬಹುದು ಎಂದು ಈ ಸಂಬಂಧ ಭಾರತ ಪಾಕ್ನೊಂದಿಗೆ ಮಾತುಕತೆ ನಡೆಸಿ ಅನುಮತಿ ಕೂಡಾ ಪಡೆದುಕೊಂಡಿತ್ತು. ಅದರಂತೆಯೇ ಪಾಕ್ ವಾಯುಗಡಿ ಪ್ರವೇಶ ಮಾಡಿದ್ದ ಏರ್ ಇಂಡಿಯಾ ವಿಮಾನವನ್ನು ಸ್ವಾಗತಿಸಿದ ಪಾಕ್ ಏರ್ ಕಂಟ್ರೋಲರ್ ಅಧಿಕಾರಿಗಳು ಭಾರತದ ಪೈಲಟ್ಗಳನ್ನು ಉದ್ದೇಶಿಸಿ, ಪಾಕ್ ವಾಯುಗಡಿಗೆ ಸ್ವಾಗತ. ಪ್ರಸ್ತುತ ಪಾಕ್ ವಾಯುಗಡಿಯಲ್ಲಿ ಚಲಿಸುತ್ತಿರುವುದು ಏರ್ ಇಂಡಿಯಾ ವಿಮಾನವೇ ಎಂಬುದನ್ನು ಖಚಿತಪಡಿಸಿ ಎಂದು ಕೇಳಿದೆ. ಇದಕ್ಕೆ ಭಾರತದ ಪೈಲಟ್ಗಳು ಹೌದು ಇದು ಏರ್ ಇಂಡಿಯಾ ವಿಮಾನ. ಫ್ರಾಂಕ್ ಫರ್ಟ್ ನತ್ತ ಸಾಗಿದೆ ಎಂದು ತಿಳಿಸಿದ್ದಾರೆ.
ಮುಂಬೈನಿಂದ ಎಪ್ರಿಲ್ನಲ್ಲಿ ಮಧ್ಯಾಹ್ನ 2.30ಕ್ಕೆ ಟೇಕ್ ಆಫ್ ಆಗಿದ್ದ ವಿಮಾನವು ಸಂಜೆ 5.00ಗಂಟೆ ವೇಳೆಗೆ ಪಾಕಿಸ್ತಾನದ ವಾಯುಗಡಿ ಪ್ರವೇಶ ಮಾಡಿತ್ತು. ಈ ಸಂದರ್ಭ ಭಾರತದ ವಿಮಾನವನ್ನು ಪಾಕಿಸ್ತಾನದ ಏರ್ ಕಂಟ್ರೋಲರ್ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭ ಸಂಪರ್ಕ ಸಾಧ್ಯವಾಗಿದ್ದು, ಪಾಕ್ ಎಟಿಸಿ ಅಧಿಕಾರಿಗಳು ಭಾರತೀಯ ಪೈಲಟ್ ಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಅಸಲಾಂ ಮಾಲಿಕುಂ, ಇದು ಕರಾಚಿ ಕಂಟ್ರೋಲ್, ಪಾಕ್ ವಾಯುಗಡಿಗೆ ಆಗಮಿಸಿದ ಭಾರತದ ಏರ್ ಇಂಡಿಯಾ ವಿಮಾನಕ್ಕೆ ನಾವು ಸ್ವಾಗತ ಕೋರುತ್ತೇವೆ. ದಯಮಾಡಿ ಪ್ರಸ್ತುತ ಪಾಕ್ ವಾಯುಗಡಿಯಲ್ಲಿ ಚಲಿಸುತ್ತಿರುವುದು. ಏರ್ ಇಂಡಿಯಾ ವಿಮಾನವೇ ಎಂಬುದನ್ನು ಖಚಿತಪಡಿಸಿ ಎಂದು ಕೇಳಿದೆ. ಇದಕ್ಕೆ ಭಾರತದ ಪೈಲಟ್ ಗಳು ಹೌದು ಇದು ಏರ್ ಇಂಡಿಯಾ ವಿಮಾನ. ಫ್ರಾಂಕ್ ಫರ್ಟ್ ನತ್ತ ಸಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭ ಮಾತು ಮುಂದುವರೆಸಿದ ಪಾಕ್ ಎಟಿಸಿ ಅಧಿಕಾರಿಗಳು, ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲಿ ನೀವು ಪರಿಹಾರ ವಿಮಾನಗಳನ್ನು ಕಳುಹಿಸುತ್ತಿದ್ದೀರಿ. ನಿಮ್ಮ ಈ ಕಾರ್ಯ ಹೆಮ್ಮೆ ಪಡುವಂತದ್ದು, ಪ್ರೌಡ್ ಆಫ್ ಯೂ.. ಗುಡ್ ಲಕ್ ಎಂದು ಹೇಳಿದೆ. ಪಾಕ್ ಎಟಿಸಿ ಅಧಿಕಾರಿಗಳ ಮಾತಿಗೆ ಅಚ್ಚರಿಗೊಂಡ ಭಾರತೀಯ ಪೈಲಟ್ ಗಳು ಥ್ಯಾಂಕ್ ಯೂ ಸೋ ಮಚ್ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಭಾರತದ ಪೈಲಟ್ಗಳಿಗೆ ಪಾಕಿಸ್ತಾನದ ಎಟಿಸಿ ಅಧಿಕಾರಿಗಳು ಇರಾನ್ ನಲ್ಲಿ ನೆರವು ಕೂಡ ನೀಡಿದ್ದಾರೆ. ಇರಾನ್ ವಾಯುಗಡಿಯನ್ನು ಭಾರತದ ಏರ್ ಇಂಡಿಯಾ ವಿಮಾನ ಪ್ರವೇಶ ಮಾಡಿದಾಗ ತಾಂತ್ರಿಕ ಕಾರಣದಿಂದಾಗಿ ಇರಾನ್ ಎಟಿಸಿ ಟವರ್ ಸಂಪರ್ಕ ಸಾಧ್ಯವಾಗಿರಲಿಲ್ಲ. ಈ ಸಂದರ್ಭ ಪಾಕಿಸ್ತಾನ ಎಟಿಸಿ ಅಧಿಕಾರಿಗಳು ಇರಾನ್ ಎಟಿಸಿಯನ್ನು ಸಂಪರ್ಕಿಸಿದ್ದು, ಭಾರತದ ವಿಮಾನದ ಕುರಿತು ಇರಾನ್ ಎಟಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಏರ್ ಇಂಡಿಯಾ ವಿಮಾನವನ್ನು ಸಂಪರ್ಕಿಸಿದ್ದ ಇರಾನ್ ಎಟಿಸಿ ಅಧಿಕಾರಿಗಳು ಭಾರತೀಯ ಪೈಲಟ್ ಗಳಿಗೆ ಶಾರ್ಟ್ ಕಟ್ ರೂಟ್ ಸೂಚಿಸಿ ಅದೇ ಮಾರ್ಗದಲ್ಲಿ ಚಲಿಸುವಂತೆ ಸಲಹೆ ನೀಡಿದರು. ಇದರಿಂದ ಏರ್ ಇಂಡಿಯಾ ವಿಮಾನದ ಸಾಕಷ್ಟು ಪ್ರಯಾಣದ ಸಮಯ ಉಳಿತಾಯವಾಯಿತು. ಇನ್ನು ಭಾರತೀಯ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಗಡಿ ತೆರೆಯುವ ಮೂಲಕ ಪ್ರಯಾಣದ ಬರೊಬ್ಬರಿ 15 ನಿಮಿಷಗಳ ಅಂತರವನ್ನು ತಗ್ಗಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತದ ಕಾರ್ಯವನ್ನು ಪಾಕಿಸ್ತಾನ ಮಾತ್ರವಲ್ಲದೇ ಟರ್ಕಿ ಎಟಿಸಿ, ಜರ್ಮನ್ ಎಟಿಸಿ ಕೂಡ ಶ್ಲಾಘಿಸಿದೆ. ಇನ್ನು ಏಪ್ರಿಲ್ 3ರ ಬೆಳಗ್ಗೆ 9.15ಕ್ಕೆ ಜರ್ಮನಿ ತಲುಪಬೇಕಿದ್ದ ಏರ್ ಇಂಡಿಯಾ ವಿಮಾನ ಪಾಕ್ ಹಾಗೂ ಇರಾನ್ ಎಟಿಸಿ ಅಧಿಕಾರಿಗಳ ನೆರವಿನಿಂದ 45 ನಿಮಿಷ ಬೇಗ 8.35ಕ್ಕೆ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ತಲುಪಿದೆ.
ಇನ್ನು ಭಾರತದಲ್ಲಿ ಅತಂತ್ರರಾಗಿರುವ ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತು ಕೆನಡಾದ ರಾಯಭಾರ ಕಚೇರಿ ಮನವಿ ಮೇರೆಗೆ ಆಯಾ ದೇಶಗಳ ಪ್ರಜೆಗಳನ್ನು ಏರ್ ಇಂಡಿಯಾ 18 ವಿಮಾನಗಳ ಮೂಲಕ ಅವರ ತವರು ದೇಶಕ್ಕೆ ಬಿಟ್ಟು ಬರುತ್ತಿದೆ. ಈ ಪೈಕಿ ಚೀನಾದಿಂದ ಬರುತ್ತಿರುವ ವೈದ್ಯಕೀಯ ಪರಿಕರಗಳನ್ನು ಏರ್ ಇಂಡಿಯಾ ವಿಮಾನಗಳು ಹೊತ್ತು ಅಗತ್ಯ ದೇಶಗಳಿಗೆ ಸರಬರಾಜು ಮಾಡುತ್ತಿವೆ.