ಜಪಾನ್, ಎ.05 (DaijiworldNews/PY) : ಇಟಲಿಯ ಹಳ್ಳಿಯೊಂದರಲ್ಲಿ ಸ್ವಚ್ಛತೆಗೆ ಮಹತ್ವ ನೀಡಿದ ಕಾರಣದಿಂದಲೇ ಕೊರೊನಾ ಬಂದಿಲ್ಲ ಎನ್ನಲಾಗುತ್ತಿದ್ದು, ಇದೀಗ ಜಪಾನ್ ಕೂಡಾ ಕೊರೊನಾ ವಿರುದ್ದ ಹೋರಾಡುವುದೆಂದರೆ ಸ್ವಚ್ಛತೆಗೆ ಮಹತ್ವ ನೀಡಿ ಎಂದು ಹೇಳುತ್ತಿದೆ.
ಸ್ವಚ್ಛತೆಗೆ ತಮ್ಮ ಜೀವನ ಶೈಲಿಯಲ್ಲೂ ಮಹತ್ವ ಕೊಟ್ಟವರು ಎಂಬ ಮಾತು ಜಪಾನಿಯರಿಗೆ ಹೇಳಲಾಗುತ್ತದೆ. ಸ್ವಚ್ಛತೆಗೆ ಇನ್ನಷ್ಟು ಮಹತ್ವ ಕೊಡುತ್ತಿದ್ದು, ಅದೇ ಕಾರಣಕ್ಕೆ ಅವರನ್ನು ಕೊರೊನಾ ಅಷ್ಟೊಂದು ಕಾಡುತ್ತಿಲ್ಲವಂತೆ.
ಸ್ವಚ್ಛತೆ ನಮ್ಮ ಸಂಸ್ಕೃತಿ ಎಂದ ಜಪಾನಿಯರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಸ್ವಚ್ಛತೆ ಮತ್ತು ಶುಚಿತ್ವ ಕ್ರಮಗಳೇ ಇದಕ್ಕೆ ಕಾರಣ. ನಮ್ಮ ಬದುಕಿನಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಹಾಸುಹೊಕ್ಕಾಗಿದ್ದು, ನಮ್ಮ ಸಂಸ್ಕೃತಿ ಕೂಡಾ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದನ್ನು ನಾವು ನೋಡುತ್ತೇವೆ. ಆದರೆ, ಅವರಿಗೆ ಮಾಸ್ಕ್ ಧರಿಸುವುದು ಹೊಸತೇನಲ್ಲ. ಅವರು ಸಣ್ಣ ನೆಗಡಿ, ಕೆಮ್ಮು ಬಂದರೂ ಸಹ ಮಾಸ್ಕ್ ಧರಿಸಿ ತಿರುಗಾಡುತ್ತಾರೆ. ಜಪಾನಿಗೆ ಮೊದಲ ಸಲ ಹೋದವರು ಮಾಸ್ಕ್ ಧರಸಿಸಿದವರನ್ನು ನೋಡಿ ಅಚ್ಚರಿ ಪಡುತ್ತಾರೆ. ಆದರೆ, ಅವರ ಶುಚಿತ್ವದ ಕಾಳಜಿಯ ಅರಿವು ಜಗತ್ತಿಗೆ ಈಗ ಅರಿವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ ವರದಿಯಾಗಿದೆ.
ದೇಶದಲ್ಲಿ ಮೊದಲ ಹಂತದಿಂದಲೇ ನಡೆಯಬೇಕಿದ್ದ ಕ್ರೀಡಾ ಕೂಟ, ವಾಣಿಜ್ಯ ಸಭೆ ಹಾಗೂ ಸಮಾರಂಭಗಳನ್ನು ಮುಂದೂಡುವ ಕುರಿತಾಗಿ ಆದೇಶ ಹೊರಡಿಸಿದ ಜಪಾನ್ ಸರ್ಕಾರ, ಸೋಂಕು ನಿಯಂತ್ರಿಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಚೀನ ಗಡಿ ಸೇರಿದಂತೆ ಎಲ್ಲಾ ಸಾರಿಗೆ ಮಾರ್ಗವನ್ನು ಬಂದ್ ಮಾಡಿತು. ಅದರೊಂದಿಗೆ ಇತರೆ ದೇಶಗಳಿಂದ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಸೋಂಕು ಇಲ್ಲದಿದ್ದರೂ ಕ್ವಾರಂಟೇನ್ಗೆ ಒಳಪಡಿಸಿತು.
ಯಾವುದಾದರೂ ಸ್ಟೇಡಿಯಂನಲ್ಲಿ ಕ್ರೀಡಾಕೂಟ ಮುಗಿದ ಬಳಿಕ ನೋಡಿದರೆ ಎಲ್ಲೆಲ್ಲೂ ಕಸದ ರಾಶಿ ತುಂಬಿರುತ್ತದೆ. ಆದರೆ ಜಪಾನ್ನಲ್ಲಿ ಹಾಗಲ್ಲ, ಜನ ಸ್ವಯಂ ಪ್ರೇರಿತವಾಗಿ ಬುಲೆಟ್ ಟ್ರೇನ್ಗಳನ್ನು ಸ್ವಚ್ಛಗೊಳಿಸುತ್ತಾರೆ. ಯಾವುದೇ ಸಭೆ ಸಮಾರಂಭ ನಡೆದರೆ ಕಸವನ್ನು ಯಾರೊಬ್ಬರೂ ಹರಡುವುದಿಲ್ಲ. ಸಿಗರೇಟ್ ಸೇದುವವರು ತಮ್ಮೊಂದಿಗೆ ಚಿಕ್ಕ ಆ್ಯಷ್ ಟ್ರೇ ಹೊಂದಿರುತ್ತಾರಂತೆ.
ಜಪಾನ್ನ ಶಾಲೆಗಳಲ್ಲಿ ಸ್ವಚ್ಛತೆಯ ಪಾಠವನ್ನೂ ಮಕ್ಕಳಿಗೆ ಹೇಳಿ ಕೊಡಲಾಗುತ್ತದೆ. ವಿದ್ಯಾರ್ಥಿಗಳಿಂದಲೇ ಶಾಲೆ ಆವರಣ ಗುಡಿಸುವುದು, ಶೌಚಾಲಯ ತೊಳೆಯುವುದು ಮುಂತಾದ ಕೆಲಸಗಳನ್ನು ಮಾಡಿಸಲಾಗುತ್ತದೆ. ಮಕ್ಕಳಿಗೆ ಮನೆಯಲ್ಲಿಯೂ ಪಾಲಕರು ಇದೇ ಅಭ್ಯಾಸವನ್ನು ಕಲಿಸುತ್ತಾರೆ. ಈಗ ಇವೆಲ್ಲವೂ ನೆರವಿಗೆ ಬಂದಿದೆ ಎನ್ನುತ್ತದೆ ವಿಶ್ಲೇಷಣೆ.
ಕೊರೊನಾ ವೈರಸ್ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಶಾಲೆ- ಕಾಲೇಜುಗಳನ್ನು ಬಂದ್ ಮಾಡಿದ್ದರೂ, ಹೊಟೇಲ್ ಹಾಗೂ ರೆಸ್ಟೊರೆಂಟ್ಗಳು ಈ ಸಂದರ್ಭದಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಶುಚಿತ್ವ ಕಾಪಾಡುವಲ್ಲಿ ತಮ್ಮ ಜನರ ಮೇಲಿರುವ ನಂಬಿಕೆಯಿಂದಲೇ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.