ಇಸ್ಲಾಮಾಬಾದ್, ಎ.06 (DaijiworldNews/PY) : ಅಫ್ಗಾನಿಸ್ತಾನದ ತಾಲಿಬಾನಿ ಪಡೆಗಳು ಇತ್ತೀಚೆಗಷ್ಟೆ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದ್ದು, ಸದ್ಯ ಒಪ್ಪಂದವನ್ನೇ ಮುರಿದುಕೊಳ್ಳುವ ಹಂತಕ್ಕೆ ಬಂದಿವೆ.
ಅಮೆರಿಕ ವಿರುದ್ದ ಗುಡುಗಿರುವ ತಾಲೀಬಾನ್, ಶಾಂತಿ ಒಪ್ಪಂದವು ಮುರಿದು ಬೀಳುವ ಹಂತವನ್ನು ತಲುಪುತ್ತಿದೆ ಎಂದಿದೆ.
ಈ ವಿಚಾರವಾಗಿ ಭಾನುವಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ತಾಲೀಬಾನ್, ಅಮೆರಿಕ ಶಾಂತಿ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ನಾಗರಿಕರ ಮೇಲಿನ ಡ್ರೋನ್ ದಾಳಿಗಳು ಇನ್ನೂ ನಿಂತಿಲ್ಲ. ಅಲ್ಲದೇ, ಅಫ್ಗಾನಸ್ತಾನ ಸರ್ಕಾರ ಒಪ್ಪಂದದಲ್ಲಿರುವಂತೆ 5000 ಕೈದಿಗಳನ್ನು ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದೆ.
ನಾವು ಒಪ್ಪಂದದ ಬಳಿಕ ಈವರೆಗೆ ಅಫ್ಗಾನಿಸ್ತಾನ ಹಾಗೂ ಅಂತರಾಷ್ಟ್ರೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿಲ್ಲ ಎಂದು ತಾಲೀಬಾನ್ ತಿಳಿಸಿದೆ.
ಒಪ್ಪಂದವನ್ನು ಅಮೆರಿಕ ಹಾಗೂ ಅಫ್ಗಾನಿಸ್ತಾನ ಸರ್ಕಾರಗಳು ಹೀಗೆ ಉಲ್ಲಂಘನೆ ಮಾಡುತ್ತಾ ಹೋದರೆ ಸಂಘರ್ಷ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಬದಲಾಗಿ, ತಕ್ಕ ಉತ್ತರ ಮುಜಾಹುದ್ದೀನ್ ಪಡೆಗಳು ನೀಡಲಿವೆ. ಹೋರಾಟವನ್ನು ತೀವ್ರಗೊಳಿಸಲಿವೆ ಎಂದಿದೆ.
ನಾವು ಒಪ್ಪಂದ ಬದ್ದವಾಗಿರುವಂತೆ ಅಮೆರಿಕಕ್ಕೆ ಸೂಚನೆ ನೀಡುತ್ತಲೇ ಇದ್ದೇವೆ, ನಮ್ಮ ನಡುವಿನ ಒಪ್ಪಂದಕ್ಕೆ ಅದರ ಮಿತ್ರಕೂಟವೂ ಬದ್ದವಾಗಿರಬೇಕು ಎಂದು ಬುದ್ದಿ ಹೇಳುವಂತೆಯೂ ನಾವು ತಿಳಿಸುತ್ತಿದ್ದೇವೆ ಎಂದು ತಾಲಿಬಾನ್ ತಿಳಿಸಿದೆ.