ವಾಷಿಂಗ್ಟನ್, ಎ.06 (DaijiworldNews/MSP) : ಇಷ್ಟು ದಿನಗಳ ಕಾಲ ಮನುಷ್ಯರಿಗಷ್ಟೇ ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹರಡುವ ಮೂಲಕ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ಕೊರೊನಾದಿಂದ ಇದೀಗ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ಕೂಡ ಅಮೆರಿಕಾ ದೇಶದಲ್ಲಿ. ವಿಶೇಷ ಅಂದರೆ, ಅಮೆರಿಕಾದಲ್ಲಿ ಕೊರೊನಾ ಸೋಂಕು ಎಷ್ಟೊಂದು ಕಡೆ ವ್ಯಾಪಿಸಿದೆ ಎನ್ನುವುದಕ್ಕೆ ಅಲ್ಲಿನ ಮೃಗಾಲಯವೇ ಸಾಕ್ಷಿ.
ನ್ಯೂಯಾರ್ಕ್ ನಗರದಲ್ಲಿರುವ ಬ್ರಾಂಕ್ಸ್ ಮೃಗಾಲಯದಲ್ಲಿರುವ ನಾಲ್ಕು ವರ್ಷದ ನಾಡಿಯಾ ಎಂಬ ಹೆಸರಿನ ಮಲಿಯನ್ ಹುಲಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗೆಯೇ ಅಲ್ಲಿ ಆರು ಬೆಕ್ಕುಗಳಲ್ಲಿಯೂ ಕೊರೊನಾ ರೋಗ ಲಕ್ಷಣವಿರುವುದು ಕಂಡುಬಂದಿದೆ ಎಂದು ಯುಎಎಸ್ ಇಲಾಖೆ ಹೇಳಿದೆ.
ಸಾಮಾನ್ಯವಾಗಿ ಮನುಷ್ಯನಿಂದ ಕೊರೊನಾ ಪ್ರಾಣಿಗಳಿಗೆ ಹರಡುವುದಿಲ್ಲ ಎನ್ನುವುದು ಹಲವರ ವಾದವಾಗಿತ್ತು. ಆದರೆ, ಇದೀಗ ಅಮೆರಿಕಾದಲ್ಲಿ ಮನುಷ್ಯನಿಂದಲೇ ಅಲ್ಲಿನ ಹುಲಿ ಮತ್ತು ಸಾಕು ಪ್ರಾಣಿಗಳಿಗೆ ವ್ಯಾಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ‘ನನ್ನ ಪ್ರಕಾರ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲು. ಮೃಗಾಲಯದ ಹುಲಿಗೆ ಸೋಂಕು ಕಾಣಿಸಿಕೊಂಡಿರುವ ಕಾರಣ ಮಾರ್ಚ್ 16ರಿಂದಲೇ ಅದನ್ನು ಮುಚ್ಚಲಾಗಿದೆ. ಮಾರ್ಚ್ ಆರಂಭದಲ್ಲೇ ಹುಲಿಗೆ ಕೆಮ್ಮು ಕಾಣಿಸಿಕೊಂಡಿದ್ದು, ನಂತರ ಪರೀಕ್ಷೆಗೆ ಒಳಪಡಿಸಿದಾಗ ಏ.2ರಂದು ಹುಲಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅಲ್ಲದೆ, ಇದೇ ಮೃಗಾಲಯದಲ್ಲಿರುವ ಮತ್ತೆರಡು ಹುಲಿ, ಮೂರು ಸಿಂಹ ಹಾಗೂ ಆರು ಬೆಕ್ಕುಗಳಲ್ಲಿಯೂ ಕೆಮ್ಮು ಕಾಣಿಸಿಕೊಂಡಿದ್ದು, ಕೊರೊನಾ ಹರಡುವ ಅನುಮಾನ ಉಂಟಾಗಿದೆ’ ಬ್ರಾಂಕ್ಸ್ ಮೃಗಾಲಯದ ಮುಖ್ಯಸ್ಥ ಪೌಲ್ ಕ್ಯಾಲೆ ಹೇಳಿದ್ದಾರೆ.