ವಾಷಿಂಗ್ಟನ್, ಎ.08 (Daijiworld News/MB) : ಕೊರೊನಾ ವೈರಸ್ ಕುರಿತಾಗಿ ಚೀನಾವನ್ನು ತರಾಟೆಗೆ ತೆಗೆದುಕೊಂಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ ಒ) ವಿರುದ್ಧ ಕಿಡಿಕಾರಿದ್ದಾರೆ.
ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ತಡೆ ಹಿಡಿಯುತ್ತೇನೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಜಾಗತಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಅಧಿಕ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ನೀಡುವ ದೇಶವಾಗಿದೆ.
ಚೀನಾ ಪರವಾಗಿ ವಿಶ್ವ ಆರೋಗ್ಯ ಸಂಸ್ಥೆ ನಿಂತಿದೆ. ಆ ಕಾರಣದಿಂದಾಗಿ ಕೊರೊನಾ ಬಗ್ಗೆ ಯಾವುದೇ ಸುಳಿವು ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.
ಶ್ವೇತ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಗೆ ನಾವು ನೀಡುವ ಹಣವನ್ನು ತಡೆ ಹಿಡಿಯುತ್ತೇವೆ. ಏನಾಗುತ್ತದೆ ನಾವು ನೋಡುತ್ತೇವೆ ಎಂದು ಹೇಳಿದ್ದಾರೆ.
ಆದರೆ ವಿಶ್ವಸಂಸ್ಥೆಗೆ ಎಷ್ಟು ಪ್ರಮಾಣದ ಹಣವನ್ನು ತಡೆ ಹಿಡಿಯಲಾಗುವುದು ಎಂಬ ಬಗ್ಗೆ ವಿವರ ನೀಡಿಲ್ಲ. ಏತನ್ಮಧ್ಯೆ ಇದೇ ಸುದ್ದಿಗೋಷ್ಠಿಯಲ್ಲಿ ಟ್ರಂಪ್, ನಾನು ತಡೆ ಹಿಡಿದಿದ್ದೇನೆ ಎಂದು ಹೇಳಿಲ್ಲ, ತಡೆಹಿಡಿಯುವುದಾಗಿ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.