ವಾಷಿಂಗ್ಟನ್, ಎ.09 (Daijiworld News/MB) : ಕೊರೊನಾ ಮಹಾಮಾರಿಗೆ ಅಮೆರಿಕಾದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲ್ಲೇ ಇದ್ದು ಈ ಡೆಡ್ಲಿ ವೈರಸ್ಗೆ 11ಮಂದಿ ಭಾರತೀಯರು ಮೃತಪಟ್ಟಿದ್ದು ನಾಲ್ಕು ಮಹಿಳೆಯರೂ ಸೇರಿದಂತೆ 16 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೃತಪಟ್ಟವರು ಪುರುಷರಾಗಿದ್ದು ಇವರಲ್ಲಿ ಎಂಟು ಮಂದಿ ನ್ಯೂಯಾರ್ಕ್, ಮೂರು ಮಂದಿ ನ್ಯೂಜೆರ್ಸಿ, ಉಳಿದವರು ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದ ಇತರೆ ರಾಜ್ಯಗಳಿಂದ ಬಂದವರು. ಇವರಲ್ಲಿ ನಾಲ್ಕು ಮಂದಿ ನ್ಯೂಯಾರ್ಕ್ ನಗರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲಾ ಭಾರತದ ಉತ್ತರಾಖಂಡ, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರಪ್ರದೇಶ ಮೂಲದವರು ಎಂದು ತಿಳಿದುಬಂದಿದೆ.
ಅಮೆರಿಕಾದಲ್ಲಿ ಕೊರೊನಾ ಸೋಂಕು ತಗುಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಅಲ್ಲದೆ, ಭಾರತ-ಅಮೆರಿಕ ಸಂಘಸಂಸ್ಥೆಗಳು ನಿಕಟ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿವೆ ಎಂದು ವರದಿ ತಿಳಿಸಿದೆ.
ಇನ್ನು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ಕೆಲವು ಮೃತರ ಶವಸಂಸ್ಕಾರಕ್ಕೂ ಸಂಬಂಧಿಕರು ಪಾಲ್ಗೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಶವಸಂಸ್ಕಾರವನ್ನು ಸ್ಥಳೀಯ ಅಧಿಕಾರಿಗಳೇ ನೆರವೇರಿಸುತ್ತಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಈಗಾಗಲೇ 15 ಸಾವಿರಕ್ಕೂ ಬಲಿಯಾಗಿದ್ದು 4 ಲಕ್ಷಕ್ಕೂಅಧಿಕ ಮಂದಿಯನ್ನು ಈ ಸೋಂಕು ತಗುಲಿದೆ. 24 ಗಂಟೆಗಳಲ್ಲಿ 1,480 ಸಾವು ಸಂಭವಿಸಿದೆ.