ವಾಷಿಂಗ್ಟನ್, ಎ.09 (DaijiworldNews/PY) : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧಗಳನ್ನು ಸಡಿಸಿರುವ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿನ ಯುದ್ದದ ನೀತಿ ಬದಲಾವಣೆಗೆ ಈ ಔಷಧ ಪ್ರಮುಖ ಕಾರಣವಾಗಲಿದೆ ಎಂದು ಪ್ರಧಾನಿ ಮೋದಿ ಹಾಗೂ ಭಾರತೀಯ ಜನರ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಔಷಧದ ಮೇಲಿನ ನಿರ್ಬಂಧ ಸಡಿಸಿದಕ್ಕಾಗಿ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ 24 ಗಂಟೆಗಳ ಅವಧಿಯಲ್ಲಿಎರಡನೇ ಬಾರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ, ನಿರ್ಬಂಧಗಳನ್ನು ತೆಗೆದುಹಾಕದಿದ್ದರೆ ಪ್ರತೀಕಾ ತೀರಿಸಿಕೊಳ್ಳುತ್ತೇವೆ ಎಂದು ಹೇಳಿದ್ದ ಟ್ರಂಪ್ ಅವರ ಮಾತನ್ನೂ ಈ ವೇಳೆ ನೆನಪಿಸಿಕೊಳ್ಳಬೇಕಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಗತ್ಯ ಸಮಯದಲ್ಲಿ ಸ್ನೇಹಿತರ ಮಧ್ಯೆ ಇನ್ನೂ ಹೆಚ್ಚಿನ ಸಹಕಾರದ ಅಗತ್ಯವಿದೆ. ಎಂದಿಗೂ ಭಾರತದ ನಿರ್ಧಾರವನ್ನು ಮರೆಯಲಾಗುವುದಿಲ್ಲ. ಈ ಹೋರಾಟದಲ್ಲಿ ಭಾರತದ ಜನರಿಗೆ ಮಾತ್ರವಲ್ಲ, ಮಾನವೀಯತೆಗೆ ಸಹಾಯ ಮಾಡುವ ಮೂಲಕ ಪ್ರಬಲ ನಾಯಕತ್ವವನ್ನು ವಹಿಸಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾಗಳು ಎಂದು ಟ್ರಂಪ್ ಅವರು ಟ್ವೀಟ್ನಲ್ಲಿ ತಿಳಸಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಉಪಯೋಗಿಸುವ ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿಷೇಧವನ್ನು ಹಿಂಪಡೆಯದಿದ್ದರೆ ಪ್ರತೀಕಾರದ ಸಾಧ್ಯತೆಯಿದೆ ಎಂದು ತಿಳಿಸಿದ್ದರು.
ಗುಜರಾತ್ನ ಮೂರು ಕಾರ್ಖಾನೆಗಳಿಂದ 29 ಮಿಲಿಯನ್ ಡೋಸ್ ಹೈಡ್ರೋಕ್ಸಿಕ್ಲೋರೋಕ್ವಿನ್ ಔಷಧ ತುಂಬಿದ ಹಡಗು ಇದೀಗ ಅಮೆರಿಕದತ್ತ ತೆರಳುತ್ತಿದೆ ಎಂಬ ಮಾಹಿತಿ ಪಡೆದ ಬಳಿಕ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇದೀಗ ತನ್ನ ವರಸೆ ಬದಲಿಸಿ ಬುಧವಾರ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು.