ಶಾಂಘೈ, ಎ.10 (DaijiworldNews/PY) : ಚೀನಾದಲ್ಲಿ ಕೊರೊನಾ ದಾಳಿ ನಂತರ ಮಹತ್ತರ ಬದಲಾವಣೆಯೊಂದಕ್ಕೆ ಕಾರಣವಾಗಿದೆ. ಜಾನುವಾರು ಹಾಗೂ ಸಾಕುಪ್ರಾಣಿಗಳ ಮರುವರ್ಗೀಕರಿಸಿ ಕರಡು ಸಿದ್ದಪಡಿಸಿದ್ದು, ಅದರಲ್ಲಿ ಶ್ವಾನವನ್ನು ಜಾನುವಾರುಗಳ ಪಟ್ಟಿಯಿಂದ ತೆಗೆದು ಸಾಕು ಪ್ರಾಣಿಗಳ ಪಟ್ಟಿಗೆ ಸೇರಿಸಿದೆ.
ಚೀನಾದ ಹಲವು ಪ್ರಾಂತ್ಯಗಳಲ್ಲಿ ನಾಯಿಯನ್ನು ಆಹಾರದ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗಿರುವಾಗಲೇ, ಹೊಸ ವರ್ಗೀಕರಣ ಪಟ್ಟಿಯನ್ನು ಚೀನಾದ ಕೃಷಿ ಸಚಿವಾಲಯವು ಬಿಡುಗಡೆ ಮಾಡಿದ್ದು, ಅಲ್ಲಿ ಇನ್ನು ಮುಂದೆ ನಾಯಿಯನ್ನು ಜಾನುವಾರು ಎಂದು ಪರಿಗಣಿಸದೇ ಸಾಕುಪ್ರಾಣಿಯೆಂದು ಪರಿಗಣಿಸಲು ತೀರ್ಮಾನಿಸಲಾಗಿದೆ. ಜಾನುವಾರುಗಳನ್ನು ಹಾಲು, ಕ್ರೀಡೆ, ಔಷಧ, ಆಹಾರ ಹಾಗೂ ಮಿಲಿಟರಿ ಉದ್ದೇಶಕ್ಕೆ ಜಾನುವಾರುಗಳನ್ನು ಬಳಸಿಕೊಳ್ಳಲಾಗುತ್ತದೆ.
ನಾಗರಿಕತೆ ಬೆಳೆದಂತೆಲ್ಲಾ ಮಾನವನ ಒಡನಾಡಿಯಾಗಿ ನಾಯಿಗಳು ಜೊತೆಗೆ ಬಂದಿವೆ. ಅಲ್ಲದೇ, ನಾಯಿಯನ್ನು ಜಗತ್ತು ಕೂಡಾ ಜಾನುವಾರು ಎಂದು ಪರಿಗಣಿಸಿಲ್ಲ. ಹಾಗಾಗಿ ಇನ್ನು ಮುಂದೆ ಚೀನಾ ಕೂಡಾ ಅದನ್ನು ಜಾನುವಾರು ಎಂದು ಪರಿಗಣಿಸದೇ ಸಾಕು ಪ್ರಾಣಿಯ ಪಟ್ಟಿಗೆ ಸೇರಿಸುತ್ತಿದೆ ಎಂದು ಹೊಸ ಕರಡಿನಲ್ಲಿ ತಿಳಿಸಿದೆ.
ಆದರೆ, ಚೀನಾ ಸರ್ಕಾರವು ಆಹಾರಕ್ಕಾಗಿ ನಾಯಿಯನ್ನು ಬಳಸಿಕೊಳ್ಳಬಾರದು ಎಂದು ಅಧಿಕೃತವಾಗಿ ಹೇಳಿಲ್ಲವಾದರೂ, ಈ ನಿಟ್ಟಿನಲ್ಲಿ ಪ್ರಾಣಿಗಳ ಮರುವರ್ಗೀಕರಣವೂ ಮಹತ್ವದ್ದು ಎಂದು ನಾಗರಿಕ, ಪ್ರಾಣಿ ಸಂರಕ್ಷಣಾ ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಇತ್ತೀಚೆಗೆ ಚೀನಾದಲ್ಲಿ ನಾಯಿಯ ಮಾಂಸ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಈಗಾಗಲೇ ದಕ್ಷೀಣ ಚೀನಾದ ಶೆಂಜೆನ್ ಅದನ್ನು ನಿರ್ಬಂಧಿಸಿದೆ. ಆದರೂ, ಚೀನಾದಲ್ಲಿ ಮಾಂಸಕ್ಕಾಗಿ 10 ಮಿಲಿಯನ್ ನಾಯಿಗಳನ್ನು ಕೊಲ್ಲಲಾಗುತ್ತಿದೆ. ಅಲ್ಲದೇ, ಪ್ರತಿ ವರ್ಷವೂ ಚೀನಾದ ಗೌಂಗ್ಸಿ ಪ್ರಾಂತ್ಯದ ಯುಲಿನ್ ಎಂಬಲ್ಲಿ ನಾಯಿ ಮಾಂಸದ ಹಬ್ಬವನ್ನೇ ಆಚರಿಸಲಾಗುತ್ತದೆ.
ಬಾವಲಿಗಳ ಮೂಲಕ ಕೊರೊನಾ ವೈರಸ್ ಎಂಬ ಮಹಾಮಾರಿ ಮಾನವನ ದೇಹ ಪ್ರವೇಶಿಸಿದೆ ಎಂಬ ಪ್ರಬಲವಾದ ಹಿನ್ನೆಲೆಯಲ್ಲಿ ಚೀನಾ ಇತ್ತೀಚೆಗೆ ಕಾಡು ಪ್ರಾಣಿಗಳ ಮಾರಾಟಕ್ಕೆ ನಿಷೇಧ ಹೇರಿತ್ತು. ಹೀಗಿರುವಾಗಲೇ, ಜಾನುವಾರುಗಳ ಪಟ್ಟಿಯಿಂದ ನಾಯಿಯನ್ನು ಕೈ ಬಿಟ್ಟಿರುವುದು ಸರ್ಕಾರದ ಮಹತ್ವದ ತೀರ್ಮಾನ ಎಂದು ಪರಿಗಣಿಸಲಾಗಿದೆ. ಇದು ಭವಿಷ್ಯದಲ್ಲಿ ನಾಯಿ ಮಾಂಸದ ನಿಷೇಧಕ್ಕೆ ಕಾರಣವಾಗಬಹುದು ಎಂದೂ ಪ್ರಾಣಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.