ಲಂಡನ್, ಎ.10 (Daijiworld News/MB) : ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟದ ಮನವಿಯ ಹಿನ್ನೆಲೆ ವಿಚಾರಣೆ ನಡೆಸಿದ ಲಂಡನ್ನ ಹೈಕೋರ್ಟ್ ದಿವಾಳಿತನ ಆದೇಶವನ್ನು ಮುಂದೂಡಿಕೆ ಮಾಡಿದ್ದು ಮದ್ಯದ ದೊರೆ ವಿಜಯ್ ಮಲ್ಯಗೆ ತಾತ್ಕಾಲಿಕವಾಗಿ ಕೊಂಚ ರಿಲೀಫ್ ದೊರೆತಿದೆ.
ಈ ಕುರಿತಾಗಿ ಗುರುವಾರ ತೀರ್ಪು ನೀಡಿರುವ ಮುಖ್ಯ ದಿವಾಳಿತನ ಮತ್ತು ಕಂಪನಿ ನ್ಯಾಯಾಲಯದ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಭಾರತದ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಗಳು ಹಾಗೂ ಕರ್ನಾಟಕ ಹೈಕೋರ್ಟ್ನ ಮುಂದೆ ಇರುವ ಅರ್ಜಿಗಳ ಇತ್ಯರ್ಥವಾಗುವವರೆಗೆ ಅವರಿಗೆ ಸಾಲ ಮರುಪಾವತಿಗೆ ಸಮಯ ನೀಡಬೇಕು ಎಂದು ತಿಳಿಸಿದ್ದಾರೆ.
"ಈ ದಿವಾಳಿತನದ ಅರ್ಜಿಯು ಯಾವುದೇ ಮಾನದಂಡವನ್ನು ಮೀರಿದ್ದಾಗಿದ್ದು ಭಾರತದಲ್ಲಿ ವಿಚಾರಣೆಗಳು ನಡೆಯುತ್ತಿರುವ ಸಮಯದಲ್ಲಿ ಬ್ಯಾಂಕುಗಳು ದಿವಾಳಿತನದ ಆದೇಶಕ್ಕಾಗಿ ಒತ್ತಾಯಿಸುತ್ತಿವೆ. ನನ್ನ ತೀರ್ಪಿನ ಕುರಿತು ಹೇಳುವುದಾದರೆ ಬ್ಯಾಂಕುಗಳು ಭಾಗಶಃ ಸುರಕ್ಷಿತವಾಗಿವೆ. ಅರ್ಜಿಯ ವಿಚಾರಣೆ ಉದ್ದೇಶದಿಂದ ಸಾಲಗಳನ್ನು ಪೂರ್ಣವಾಗಿ ಪಾವತಿಸುವ ಸಮಯವನ್ನು ವಿಸ್ತರಿಸಬೇಕು ಎಂದು ಹೇಳಿದ್ದಾರೆ.
ಮಲ್ಯ ಅವರಿಂದ 1.145 ಬಿಲಿಯನ್ ಸಾಲವನ್ನು ಮರುಪಾವತಿಸುವ ಸಲುವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟವು ಮಲ್ಯ ವಿರುದ್ಧ ದಿವಾಳಿತನದ ಆದೇಶವನ್ನು ಕೋರಿತ್ತು ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್ಫಿಶರ್ ಏರ್ಲೈನ್ಸ್ನ ಸಾಲಗಳ ಕುರಿತು ಕಳೆದ ವರ್ಷ ಡಿಸೆಂಬರ್ನಲ್ಲಿ ಎರಡೂ ಕಡೆಯಿಂದ ವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶ ಬ್ರಿಗ್ಸ್ ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.