ಜಿನೇವಾ, ಎ.11 (Daijiworld News/MB) : ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಅಕಾಲಿಕವಾಗಿ ತೆರವು ಮಾಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಎಲ್ಲ ದೇಶಗಳಿಗೆ ಎಚ್ಚರಿಕೆ ನೀಡಿದೆ.
ಲಾಕ್ಡೌನ್ ಅಕಾಲಿಕವಾಗಿ ತೆರವು ಮಾಡುವುದರಿಂದ ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಲಾಕ್ಡೌನ್ ನಿರ್ಬಂಧಗಳನ್ನು ತೆರವುಗೊಳಿಸಲು ಕೆಲವು ದೇಶಗಳು ಚಿಂತನೆ ನಡೆಸಿದೆ. ಅತೀ ಶೀಘ್ರವಾಗಿ ಲಾಕ್ಡೌನ್ ತೆರವುಗೊಳಿಸುವುದು ಬಹಳ ಅಪಾಯಕಾರಿ ಎಂದು ಡಬ್ಲ್ಯುಎಚ್ಒ ಮಹಾ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.
ಕೆಲವು ದೇಶಗಳು ಈವರೆಗೆ ಮನೆಯಲ್ಲೇ ಇರಿ ಎಂದು ಆದೇಶಿಸಿದ್ದು ಅದನ್ನು ತೆರವುಗೊಳಿಸಲು ಮುಂದಾಗಿರುವುದು ನನಗೆ ಗೊತ್ತಾಗಿದೆ. ಆದರೆ ಸರಿಯಾಗಿ ಇದರ ನಿರ್ವಹಣೆ ಆಗದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಡಬ್ಲ್ಯುಎಚ್ಒ ನಿರ್ಬಂಧಗಳನ್ನು ಕ್ರಮೇಣ ಮತ್ತು ಸುರಕ್ಷಿತವಾಗಿ ತೆರವುಗೊಳಿಸುವ ತಂತ್ರಗಳ ಕುರಿತು ಕೊರೊನಾದಿಂದ ಅತಿಹೆಚ್ಚು ಸಮಸ್ಯೆಗೆ ಈಡಾಗಿರುವ ರಾಷ್ಟ್ರಗಳ ಜತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಹಾಗೆಯೇ ನಿರ್ಬಂಧಗಳನ್ನು ತೆರವು ಮಾಡುವ ಮುನ್ನ ಆರು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಅವರು ತಿಳಿಸಿದ್ದಾರೆ.
ಸೋಂಕು ಹರಡುವಿಕೆ ನಿಯಂತ್ರಣ, ಸಾರ್ವಜನಿಕ ಆರೋಗ್ಯ ಸೇವೆಗಳ ಲಭ್ಯತೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಔಟ್ಬ್ರೇಕ್ ಅಪಾಯ ಕಡಿಮೆ ಇರುವಂತೆ ನೋಡಿಕೊಳ್ಳುವುದು, ಕೆಲಸದ ಸ್ಥಳಗಳು ಮತ್ತು ಶಾಲೆಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳು, ಬೇರೆಡೆಗಳಿಂದ ವೈರಸ್ ಬರದಂತೆ ತಡೆಯಲು ಕ್ರಮಗಳು, ಸಮುದಾಯಗಳಲ್ಲಿ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ ಇವಿಷ್ಟು ಅಂಶ ಗಮನದಲ್ಲಿಟ್ಟುಕೊಂಡು ಮತ್ತು ಈ ವಿಚಾರಗಳಲ್ಲಿ ಸಿದ್ಧತೆ ಮಾಡಿಕೊಂಡೇ ನಿರ್ಬಂಧಗಳನ್ನು ತೆರವುಗೊಳಿಸಬಹುದು ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.
ಜಗತ್ತನ್ನೇ ಸ್ತಬ್ಧಗೊಳಿಸಿರುವ ಕೊರೊನಾ ವೈರಸ್ ಸೋಂಕಿಗೆ ಶುಕ್ರವಾರದ ವೇಳೆಗೆ ವಿಶ್ವದಾದ್ಯಂತ 1,00,376 ಜನ ಮೃತಪಟ್ಟಿದ್ದಾರೆ. 16.19 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ.