ರೋಮ್, ಎ.11 (Daijiworld News/MB) : ಕೊರೊನಾದಿಂದಾಗಿ ತತ್ತರಿಸಿ ಹೋಗಿರುವ ಇಟಲಿ ಮತ್ತೆ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಿದೆ. ಲಾಕ್ ಡೌನ್ ಮುಂದುವರಿಸುವ ಕುರಿತು ಇಟಲಿ ಪ್ರಧಾನಿ ಗ್ಯುಸೆಪ್ಪೆ ಕೋಂಟೆ ಅಧಿಕೃತವಾಗಿ ಘೋಷಿಸಿದ್ದಾರೆ.
ನಾವು ಈಗ ಲಾಕ್ಡೌನ್ ಕೊನೆಗೊಳಿಸಿದ್ದಲ್ಲಿ, ಈವರೆಗೆ ಲಾಕ್ಡೌನ್ನಿಂದ ಸಾಧಿಸಿರುವ ಎಲ್ಲಾ ಶ್ರಮ ವ್ಯರ್ಥವಾಗುತ್ತದೆ. ಅಷ್ಟು ಮಾತ್ರವಲ್ಲದೇ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಗಳು ಇದೆ ಎಂದು ಪ್ರಧಾನಿ ಕೋಂಟೆ ಹೇಳಿದ್ದಾರೆ.
ಕೊರೊನಾ ವೈರಸ್ ಇಟಲಿಯಲ್ಲಿ ದೃಢಪಟ್ಟ ಬಳಿಕ ಒಂದು ತಿಂಗಳ ಕಾಲ ದೇಶಾದ್ಯಂತ ಜನರ ಓಡಾಟ, ವಸ್ತುಗಳ ಖರೀದಿ ಮೇಲೆ ಕಠಿಣ ನಿರ್ಬಂಧ ವಿಧಿಸಲಾಗಿತ್ತು. ಫೆ. 20 ರಂದು ಇಟಲಿಯ ಉತ್ತರ ನಗರ ಕೋಡೋಗ್ನೋ ಪ್ರದೇಶದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಆ ಬಳಿಕ ಕೊರೊನಾದಿಂದಾಗಿ ಇಟಲಿ ತತ್ತರಿಸಿ ಹೋಗಿದೆ.
ಈಗಾಗಲೇ ಕೊರೊನಾದಿಂದಾಗಿ ಇಟಲಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಸಾವಿರ ದಾಟಿದ್ದು ಕಳೆದ 24 ಗಂಟೆಯಲ್ಲಿ 570 ಜನರು ಮೃತಪಟ್ಟಿದ್ದಾರೆ. ಆದರೆ ಇದು ಸೋಂಕು ಹರಡಲು ಆರಂಭವಾದ ಬಳಿಕದ ಸಾವಿನ ಸಂಖ್ಯೆಗಿಂತ ಬಹಳ ಕಡಿಮೆ ಎಂದು ವರದಿ ತಿಳಿಸಿದೆ.
ಒಂದು ವಾರದ ಹಿಂದೆ 4,068 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಶುಕ್ರವಾರದ ಹೊತ್ತಿಗೆ ಈ ಸಂಖ್ಯೆ 3,497ಕ್ಕೆ ಇಳಿಕೆಯಾಗಿರುವುದಾಗಿ ವರದಿ ತಿಳಿಸಿದೆ.