ವಾಷಿಂಗ್ಟನ್, ಎ.11 (Daijiworld News/MB) : ಕೊರೊನಾ ಸಾಂಕ್ರಾಮಿಕವಾಗಿ ಹರಡುತ್ತಿದ್ದರೂ ತಮ್ಮ ನಾಗರಿಕರನ್ನು ತಮ್ಮ ದೇಶಕ್ಕೆ ಹಿಂದಕ್ಕೆ ಕರೆಸಿಕೊಳ್ಳದೆ ನಿರಾಕರಿಸಿದ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ವೀಸಾ ನಿಯಮದ ಮೂಲಕ ವೀಸಾ ನಿರ್ಬಂಧಿಸಿದ್ದಾರೆ.
ವೀಸಾ ನಿರ್ಬಂಧಕ್ಕೆ ಸಂಬಂಧಿಸಿದಂತೆ ಟ್ರಂಪ್ ಈಗಾಗಲೇ ಜ್ಞಾಪಕ ಪತ್ರ ಹೊರಡಿಸಿದ್ದಾರೆ. ವಿಸಾ ನಿರಾಕರಣೆಯು ತಕ್ಷಣದಿಂದಲೇ ಜಾರಿಯಾಗಲಿದ್ದು, ಈ ವರ್ಷದ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರಲಿದೆ. ದೇಶಗಳು ತಮ್ಮ ನಾಗರಿಕರನ್ನು ವಾಪಸ್ ಕರೆಸಿಕೊಳ್ಳದೇ ಇರುವುದು ಅಥವಾ ಅನಗತ್ಯ ವಿಳಂಬ ಮಾಡುವುದು ಅಮೆರಿಕನ್ನರಿಗೆ ಒಪ್ಪಿತವಲ್ಲದ ಸಾರ್ವಜನಿಕ ಆರೋಗ್ಯ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕುರಿತಾಗಿ ಆಂತರಿಕ ಭದ್ರತಾ ಕಾರ್ಯದರ್ಶಿ, ರಾಜ್ಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ ಪ್ರಜೆಗಳ ವಾಪಸಾತಿಗೆ ದೇಶ ಸಮರ್ಥವಾಗಿರಬೇಕು. ಈ ವಿಷಯದಲ್ಲಿ ದೇಶದ ಆಂತರಿಕ ಭದ್ರತಾ ಕಾರ್ಯದರ್ಶಿಯು ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದ್ದಾರೆ. ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಅಮೆರಿಕದ ಕೋರಿಕೆಯನ್ನು ಮನ್ನಿಸದ ರಾಷ್ಟ್ರಗಳನ್ನು ಅವರು ಗುರುತಿಸಲಿದ್ದಾರೆ ಎಂದು ಹೇಳಿದ್ದಾರೆ.