ವಾಷಿಂಗ್ಟನ್, ಎ.13 (Daijiworld News/MB) : ಅಮೆರಿಕದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಲ್ಲೇ ಇದ್ದು ಕಳೆದ 24 ಗಂಟೆಗಳಲ್ಲಿ 1,514 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿಗಳಿಂದ ತಿಳಿದು ಬಂದಿದೆ. ಶನಿವಾರ 1,920 ಮಂದಿ ಕೊರೊನಾದಿಂದಾಗಿ ಮೃತಪಟ್ಟಿದ್ದು ಅಮೆರಿಕದ ಕಾಲಮಾನದ ಪ್ರಕಾರ, ಭಾನುವಾರ ರಾತ್ರಿ 8:30ರ ವರೆಗೂ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22,020 ಮುಟ್ಟಿದೆ.
ಹೊಸತಾಗಿ 24,718 ಜನರಲ್ಲಿ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 5,55,313 ಕ್ಕೆ ಏರಿಕೆಯಾಗಿದೆ.
ಅಮೆರಿಕಾದಲ್ಲಿ ಕೊರೊನಾ ಗಂಭೀರ ಪರಿಸ್ಥಿತಿ ಉಂಟು ಮಾಡುತ್ತಿರುವ ಹಿನ್ನಲೆಯಲ್ಲಿ ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದು, ತುರ್ತು ಕಾರ್ಯಾಚರಣೆಗಳಿಗಾಗಿ 50 ಸಾವಿರ ಯೋಧರನ್ನು ನಿಯೋಜಿಸಿದ್ದಾರೆ.
ವಿಶ್ವದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ನ್ಯೂಯಾರ್ಕ್ನಲ್ಲಿ 9,566 ಮಂದಿ ಕೊರೊನಾಗೆ ಬಲಿಯಾಗಿದ್ದು 1,88,694 ಜನರಿಗೆ ಸೋಂಕು ತಗಲಿದೆ.
ಇಟಲಿಯಲ್ಲೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು 19,899 ಜನರು ಬಲಿಯಾಗಿದ್ದಾರೆ. 1,56,363 ಜನರಲ್ಲಿ ಕೊರೊನಾ ದೃಢಪಟ್ಟಿದೆ.
ವಿಶ್ವದಾದ್ಯಂತ 18,54,654 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಸೋಂಕಿನಿಂದಾಗಿ ಸಾವಿಗೀಡಾದವರ ಸಂಖ್ಯೆ 1,14,358 ಏರಿಕೆಯಾಗಿದೆ. ಹಾಗೆಯೇ ಈವರೆಗೆ 4,27,379 ಮಂದಿ ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ ಭಾನುವಾರದ ವರೆಗೂ ಕೊರೊನಾ ಸೋಂಕಿತರ ಒಟ್ಟಾರೆ ಸಂಖ್ಯೆ 8,447ಕ್ಕೆ ತಲುಪಿದೆ. 273 ಮಂದಿ ಸಾವಿಗೀಡಾಗಿದ್ದು, ಈವರೆಗೆ 716 ಮಂದಿ ಗುಣಮುಖರಾಗಿದ್ದಾರೆ.