ವಾಷಿಂಗ್ಟನ್, ಏ 14 (Daijiworld News/MSP): ವಿಶ್ವದಾದ್ಯಂತ ಕೊರೊನಾ ವೈರಸ್ ಮಾರಾಣಾಂತಿಕವಾಗಿ ಹರಡುತ್ತಿದ್ದು, ಇದಕ್ಕೆ ಮೂಲ ಕಾರಣ ಚೀನಾ. ಕೋವಿಡ್ -19 ಬಗ್ಗೆ ತಪ್ಪು ಮಾಹಿತಿ ನೀಡಿ ಅಂತಾರಾಷ್ಟ್ರೀಯ ಸಮುದಾಯವನ್ನೇ ದಿಕ್ಕು ತಪ್ಪಿಸಿದೆ, "ಮುಂದೆ ತಕ್ಕ ಪಾಠ ಕಲಿಸಲಿದ್ದೇವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಚೀನಾ ವಿರುದ್ದ ಗುಡುಗಿದ್ದಾರೆ.
ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಗೆ ಪ್ರಪಂಚವನ್ನೇ ತನ್ನ ತೆಕ್ಕೆಗೆ ಪಡೆದ ಕೊರೊನಾಕ್ಕೆ ಕಾರಣವಾದ ಚೀನಾ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದ ಅವರು, ಚೀನಾ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ನಿಮಗೆ ಹೇಗೆ ಗೊತ್ತು ? ಮತ್ತು ನೀವ್ಯಾಕೆ ಹಾಗೆ ಭಾವಿಸುತ್ತೀರಿ ಎಂದು ಮರು ಪ್ರಶ್ನೆ ಎಸೆದು ಚೀನಾ ವಿರುದ್ದ ಕ್ರಮ ಕೈಗೊಳ್ಳವ ಮುನ್ಸೂಚನೆ ನೀಡಿದ್ದರು.
ಅಮೆರಿಕದಲ್ಲಿ ಅತೀ ಹೆಚ್ಚಾಗಿ ಹರಡುತ್ತಿರುವ ಸೋಂಕು ಹಾಗೂ ಸಾವಿನ ಪ್ರಕರಣಗಳಿಂದ ತೀವ್ರ ಆತಂಕವನ್ನು ಹೊರಹಾಕಿದ ಟ್ರಂಪ್, ಅಮೆರಿಕದಲ್ಲಿ ಕೊರೊನಾ ಪಿಡುಗು ಅತಿ ಶೀಘ್ರದಲ್ಲೆ ಕೊನೆಯಾಗಲಿದೆ. ದೇಶದ ಆರ್ಥಿಕ ಪುನಃಶ್ಚೇತನಕ್ಕೆ ಈಗಾಗಲೇ ಸಾಕಷ್ಟು ಯೋಜನೆ ರೂಪಿಸಿದ್ದೇವೆ. ಇನ್ನು ಚೀನಾ ವಿರುದ್ದ ಕ್ರಮಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ಚೀನಾ ವಿರುದ್ದ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದರು.