ವಾಷಿಂಗ್ಟನ್, ಏ 15 (Daijiworld News/MSP): ದೊಡ್ಡಣ ಎಂದೇ ಕರೆಸಿಕೊಂಡಿರುವ ಅಮೆರಿಕದಲ್ಲಿ ಕೊರೊನಾ ತನ್ನ ರುದ್ರನರ್ತನ ಮುಂದುವರಿಸಿದ್ದು, ಕಳೆದ ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 2,228 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 25,757 ಗಡಿ ದಾಟಿದೆ. ಇನ್ನು ಸೋಂಕು ಪೀಡಿತರ ಸಂಖ್ಯೆ 6 ಲಕ್ಷ ದಾಟಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಯಾರ್ಕ್ ಒಂದರಲ್ಲಿಯೇ ಸಾವಿನ ಸಂಖ್ಯೆ 10,000 ದಾಟಿದೆ ಎಂದು ತಿಳಿದುಬಂದಿದೆ. ಏ. 10ರ ಬಳಿಕ ಒಂದೇ ದಿನದಲ್ಲಿ 2,108 ಮಂದಿ ಸಾವಿಗೀಡಾಗಿದ್ದು ಆ ಬಳಿಕ ನಿತ್ಯದ ಸಾವಿನ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡಿತ್ತು. ಆದರೆ, ಇದೀಗ ಮತ್ತೆ ಕೊರೊನಾ ಪ್ರಭಾವ ಇನ್ನಷ್ಟು ತೀವ್ರವಾಗಿರುವುದು ತಿಳಿದು ಬಂದಿದೆ.
ಅಮೇರಿಕಾದಲ್ಲಿ ಒತ್ಟು ಸೋಂಕಿತರ ಪೈಕಿ 6,02,989 ಸುಮಾರು 46,515 ಮಂದಿ ಗುಣಮುಖರಾಗಿದ್ದಾರೆ. ನ್ಯೂರ್ಯಕ್ ಮಾತ್ರವಲ್ಲದೆ ಸಚೂಸೆಟ್ಸ್, ಮಿಚಿಗನ್, ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ, ಇಲಿನಾಯ್ಸ್ ಮತ್ತು ಲೂಯಿಸಿಯಾನದಲ್ಲೂ ಸೋಂಕು ತೀವ್ರವಾಗಿ ಹಬ್ಬಿದೆ.
ಬಿಎನ್ಒ ನ್ಯೂಸ್ ಪ್ರಕಾರ, ಜಗತ್ತಿನಾದ್ಯಂತ ಕೋವಿಡ್-19 ದೃಢಪಟ್ಟ ಪ್ರಕರಣಗಳು 20,00,794 ತಲುಪಿದೆ. ಒಟ್ಟು 1,30,483 ಸೋಂಕಿತರು ಸಾವಿಗೀಡಾಗಿದ್ದು, 4,81,768 ಮಂದಿ ಗುಣಮುಖರಾಗಿದ್ದಾರೆ.