ಸ್ಟಾಕ್ಹೋಮ್, ಎ.15 (Daijiworld News/MB) : ಕೊರೊನಾ ವೈರಸ್ ತಡೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನಿರ್ಬಂಧಗಳನ್ನು ಹೇರದೆ ಜನರೇ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುತ್ತಾರೆ ಎಂದು ಹೇಳುತ್ತಿದ್ದ ಸ್ವೀಡನ್ ಕೊನೆಗೂ ಲಾಕ್ಡೌನ್ ಮಾಡದಿದ್ದರೂ ಕೆಲವು ನಿರ್ಬಂಧಗಳನ್ನು ಜಾರಿಗೆ ತಂದಿದೆ.
ಈ ದೇಶದ ಕೆಲವು ಪ್ರದೇಶಗಳಲ್ಲಿ ಕೊರೊನಾ ಸಾಮಾದಾಯಿಕ ಪ್ರಸರಣ ಹಂತವನ್ನು ಪ್ರವೇಶ ಮಾಡಿದ್ದು ಇದೀಗ ಸ್ವೀಡನ್ ಎಚ್ಚೆತ್ತುಕೊಂಡು ಓಡಾಟ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೆಲವೊಮದು ನಿಯಮಗಳನ್ನು ರೂಪಿಸಿದೆ.
ಈ ಕುರಿತಾಗಿ ಕೆಲವೊಂದು ಮಾರ್ಗಸೂಚಿಗಳನ್ನು ಸ್ವೀಡನ್ ಸರ್ಕಾರವು ಜಾರಿ ಮಾಡಿದ್ದು 50ಕ್ಕಿಂತ ಹೆಚ್ಚು ಜನರು ಒಟ್ಟು ಸೇರುವುದು, ಅನಗತ್ಯ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ಹೇರಿದ್ದು ಬಾರ್, ಹೊಟೇಲುಗಳು ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ತಿಳಸಿದೆ.
ರೈಲುಗಳ ಸಂಚಾರ ಕಡಿಮೆ ಮಾಡಬೇಕು, ಮನೆಯಿಂದಲೇ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡಬೇಕು, ಸೋಂಕಿತರು ಅಥವಾ ಶಂಕಿತರನ್ನು ಭೇಟಿ ಮಾಡಬಾರದು, ಸ್ಥಳೀಯ ಸಾರಿಗೆಯ ಸಂಚಾರ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಶ್ ಇರುವ ಬಸ್ ಹತ್ತಬಾರದು, ತಲುಪಬೇಕಾದ ಸ್ಥಳ ಹತ್ತಿರವಿದ್ದಲ್ಲಿ ನಡೆದುಕೊಂಡೇ ಹೋಗಬೇಕು ಎಂದು ಸೂಚನೆ ನೀಡಿದೆ.
ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದ್ದು ನಗರಪಾಲಿಕೆ ಮತ್ತು ಸ್ಥಳೀಯಾಡಳಿತಗಳು ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿಶೇಷಾಧಿಕಾರ ನೀಡಿದೆ.
ಹಾಗೆಯೇ 500ಕ್ಕಿಂತ ಅಧಿಕ ಜನರು ಇರುವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು ಸಣ್ಣ ಕಾರ್ಯಕ್ರಮ ಮಾಡಬೇಕಾದರೆ ಸಭೆ ನಡೆಸಿ ವರದಿ ನೀಡಬೇಕು. ಸೋಂಕು ಹರಡುವ ಸಾಧ್ಯತೆ ಇದ್ದರೆ ಕಾರ್ಯಕ್ರಮ ರದ್ದು ಮಾಡಲಾಗುತ್ತದೆ ಎಂದು ಹೇಳಿದೆ.
ಇನ್ನು ಜನರು ಮನೆಯಲ್ಲಿ ಇರಬೇಕಾದರೆ ಎರಡು ವಾರಗಳ ತನಕ ವೈದ್ಯರ ಶಿಫಾರಸು ಪತ್ರವಿಲ್ಲದೆ ರಜೆ ಹಾಕಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದು ಸಿಕ್ ಲೀವ್ (ಅನಾರೋಗ್ಯದ ರಜೆ) ನಿಯಮಗಳನ್ನು ಸಡಿಲಗೊಳಿಸಿದೆ.