ಚೀನಾ, ಎ.15 (Daijiworld News/MB) : ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ದೃಢವಾಗುತ್ತಿದ್ದು ಭಾನುವಾರ ಒಟ್ಟು 108 ಹೊಸ ಪ್ರಕರಣಗಳು ವರದಿಯಾಗಿದೆ.
ಆರು ವಾರಗಳಲ್ಲಿ ರಷ್ಯಾದ ಗಡಿ ಭಾಗವಾದ ಚೀನಾದ ಈಶಾನ್ಯ ಜಿಯಾಂಗ್ ಪ್ರಾಂತ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು ಗಡಿಯಿಂದ ಒಳಗೆ ಬಂದಿರುವ ಜನರಲ್ಲಿ ಈ ಸೋಂಕು ಕಂಡು ಬಂದಿದೆ.
ಚೀನಾದಲ್ಲಿ ಮಾರ್ಚ್ 5 ರಂದು 143 ಸೋಂಕುಗಳು ವರದಿಯಾಗಿದ್ದು ಆ ಬಳಿಕ ಅಧಿಕವಾಗಿ ಕೊರೊನಾ ಪ್ರಕರಣಗಳು ಕಂಡು ಬರದೇ ಹಂತ ಹಂತವಾಗಿ ಲಾಕ್ಡೌನ್ನ್ನು ಸಡಿಲಗೊಳಿಸಲಾಗಿತ್ತು. ಆದರೆ ಇದೀಗ ಗಡಿ ಭಾಗದಿಂದ ಚೀನಾಕ್ಕೆ ಬಂದಿರುವ 49 ಮಂದಿ ಚೀನಾ ಪ್ರಜೆಗಳಲ್ಲಿ ಸೋಂಕು ಪತ್ತೆಯಾಗಿದ್ದು ಮತ್ತೊಮ್ಮೆ ಸೋಂಕು ವ್ಯಾಪಕವಾಗಿ ಹರಡಿದರೆ ಎಂಬ ಆತಂಕ ಚೀನಾಕ್ಕೆ ಉಂಟಾಗಿದೆ.
ಕೊರೊನಾ ಮೊದಲು ಪತ್ತೆಯಾದ ಚೀನಾದಲ್ಲಿ ಫೆಬ್ರವರಿಯಿಂದ ಸೋಂಕಿತರ ಸಂಖ್ಯೆ ಬಹಳ ಕಡಿಮೆಯಾಗಿದ್ದು ಜನರು ಕೆಲಸ ಕಾರ್ಯಗಳಿಗೆ ಹೋಗಲು ಆರಂಭ ಮಾಡಿದ್ದಾರೆ ಎಂದು ವರದಿ ತಿಳಿಸಿದ್ದು ಇದೀಗ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಚೀನಾವು ರಷ್ಯಾದ ಗಡಿ ಸಮೀಪದ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು ಸೋಂಕಿತರು ಗಡಿ ದಾಟಿ ಬರದಂತೆ ನಿರ್ಬಂಧವನ್ನು ವಿಧಿಸಿದೆ. ಹಾಗೆಯೇ ವಿದೇಶದಿಂದ ಬರುವ ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇರಿಸಿ ಪರೀಕ್ಷೆ ಮಾಡಲಾಗುತ್ತಿದೆ.