ವಾಷಿಂಗ್ಟನ್, ಎ.16 (Daijiworld News/MB) : ಕೊರೊನಾ ವೈರಸ್ ಚೀನಾದ ವುಹಾನ್ನಲ್ಲಿರುವ ಪ್ರಯೋಗಾಲಯದಿಂದ ಹರಡಿತೆ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಸರ್ಕಾರ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ಹರಡಿದೆ. ಚೀನಾ ಇದನ್ನು ಜೈವಿಕ ಸಮರಕ್ಕಾಗಿ ಅಭಿವೃದ್ಧಿಪಡಿಸಿರಲಿಲ್ಲ. ಅಮೆರಿಕಕ್ಕಿಂತ ಹೆಚ್ಚಾಗಿ ತನಗೆ ವೈರಸ್ ವಿರುದ್ಧ ಹೋರಾಡುವ ಶಕ್ತಿ ಇದೆ ಎಂದು ಸಾಬೀತು ಪಡಿಸಲು ಈ ವೈರಸ್ನ್ನು ಅಭಿವೃದ್ದಿ ಮಾಡಿರಬಹುದೆಂದು ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ್ದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಕೊರೊನಾ ವೈರಸ್ ಚೀನಾ ಹರಡಿಲ್ಲ ಎಂಬುದನ್ನು ಅಲ್ಲಿನ ಸರ್ಕಾರ ಸಾಬೀತುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಅಮೆರಿಕದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಮಾರ್ಕ್ ಮಿಲೆ ಈ ವೈರಸ್ ಎಲ್ಲಿಂದ ಬಂದಿದೆ ಎಂಬ ಮಾಹಿತಿ ಈಗಲೂ ನಿಗೂಢವಾಗಿಯೇ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ಇದು ಚೀನಾದ ಪ್ರಯೋಗಾಲಯದಿಂದ ಹೊರ ಬಂದಿರಲಾರದು. ನೈಸರ್ಗಿಕವಾಗಿಯೇ ಹರಡಿರಬಹುದು ಎಂದು ಗುಪ್ತಚರ ವರದಿಗಳು ಹೇಳಿವೆ.
ಈ ಹಿಂದೆ ವರದಿಗಾರರು ಚೀನಾದ ವುಹಾನ್ ಲ್ಯಾಬ್ನಿಂದ ವೈರಸ್ ಹರಡಿರಬಹುದೆ ಎಂದು ವೈಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಶ್ನಿಸಿದ್ದು ಆ ಸಂದರ್ಭದಲ್ಲಿ ಟ್ರಂಪ್ ಈ ಕುರಿತಾಗಿ ತನಗೇನೂ ತಿಳಿದಿಲ್ಲ. ಈ ರೀತಿ ಹೇಗೆ ಆಯಿತು ಎಂದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದರು.
ಆ ಸಂದರ್ಭದಲ್ಲೆ ವರದಿಗಾರರು ನೀವು ಈ ಕುರಿತಾಗಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದೀರಾ ಎಂದು ಪ್ರಶ್ನಿಸಿದ್ದು ಪ್ರಯೋಗಾಲಯದ ಕುರಿತಾಗಿ ಚೀನಾ ಅಧ್ಯಕ್ಷರೊಂದಿಗೆ ನಾನು ಏನು ಮಾತನಾಡಿದೆ ಎಂಬುದರ ಕುರಿತಾಗಿ ನಾನು ಚರ್ಚೆ ನಡೆಸಲು ಇಚ್ಛಿಸುವುದಿಲ್ಲ. ಈ ಸಂದರ್ಭದಲ್ಲಿ ಆ ವಿಷಯ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದರು.
ಇದೀಗ ಈ ಕುರಿತಾಗಿ ಅನುಮಾನ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಚೀನಾದ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಹರಡಿತೆ ಎಂಬುದರ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ಈ ಮಾರಣಾಂತಿಕ ಸೋಂಕಿನಿಂದಾಗಿ ಚೀನಾದಲ್ಲಿ 3000 ಮಂದಿ ಮೃತಪಟ್ಟಿದ್ದಾರೆ ಎಂಬುದರ ಮೇಲೆಯೂ ಅಮೆರಿಕ ಶಂಕೆ ವ್ಯಕ್ತಪಡಿಸಿದೆ.
ಹಾಗೆಯೇ ಸುದ್ದಿ ವಾಹಿನಿಯ ಸಂದರ್ಶನ ಒಂದರಲ್ಲಿ ಈ ವೈರಾಣು ವುಹಾನ್ನ ಲ್ಯಾಬ್ನಿಂದ ಹರಡಿದೆ ಎಂದು ನಮಗೆ ತಿಳಿದಿದೆ. ಮೊದಲು ಸೋಂಕು ಪತ್ತೆಯಾದ ಮಾರ್ಕೇಟ್ನಿಂದ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಕೆಲವೇ ಮೈಲುಗಳ ದೂರಲ್ಲಿ ಇದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತಾಗಿ ವರದಿಯೊಂದು ವುಹಾನ್ನಲ್ಲಿರುವ ವೈರಾಲಜಿ ಲ್ಯಾಬ್ನಲ್ಲಿ ಪ್ರಯೋಗ ನಡೆದಿದ್ದು ಈ ಸಂದರ್ಭದಲ್ಲಿ ಸಾಕಷ್ಟು ಸುರಕ್ಷತೆ ಇಲ್ಲದ ಕಾರಣ ವೈರಾಣು ಪ್ರಯೋಗಾಲಯದಿಂದ ಸೋರಿಕೆಯಾಗಿದೆ. ಸಮೀಪದ ವೆಟ್ ಮಾರ್ಕೆಟ್ಗೆ (ಪ್ರಾಣಿ ಮಾರುಕಟ್ಟೆ) ಗೆ ಹರಡಿ ಅಲ್ಲಿಂದ ಜನರಿಗೆ ಹರಡಿದೆ ಹೇಳಿದೆ.