ವಾಷಿಂಗ್ಟನ್, ಎ.19 (Daijiworld News/MB) : ಕೊರೊನಾ ವೈರಸ್ ತಮ್ಮ ದೇಶದಲ್ಲಿ ಹರಡಲು ಆರಂಭವಾದ ಬಳಿಕ ಚೀನಾದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆಯ ಮೇಲೆ ಅನುಮಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಶನಿವಾರ ಈ ಕುರಿತಾಗಿ ಮಾತನಾಡಿ ಕೊರೊನಾಗೆ ಬಲಿಯಾದವರ ಸಂಖ್ಯೆಯಲ್ಲಿ ಅಮೆರಿಕಕ್ಕಿಂತಲೂ ಚೀನಾ ಮುಂದಿದೆ ಎಂದು ಹೇಳಿದ್ದಾರೆ.
ಸಾವಿನ ಸಂಖ್ಯೆಯಲ್ಲಿ ನಾವು ನಂಬರ್ ಒನ್ ಅಲ್ಲ ಚೀನಾ ನಂಬರ್ ಒನ್. ಅಮೆರಿಕ ಸಾವಿನ ಸಂಖ್ಯೆಯಲ್ಲಿ ನಮಗೆ ಹತ್ತಿರವಲ್ಲ ಅದಕ್ಕಿಂತಲೂ ಮುಂದಿದೆ. ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್ನಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆಗಳಿದ್ದೂ ಸಾವಿನ ಪ್ರಮಾಣ ಅಧಿಕವಾಗಿದೆ. ಆದರೆ ಚೀನಾದ ಈಗೀನ ಅಧಿಕೃತ ಸಾವಿನ ಸಂಖ್ಯೆಗಿಂತ ನಿಜವಾಗಿ ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಅತೀ ಹೆಚ್ಚಿದೆ ಎಂದು ಆರೋಪಿಸಿದರು.
ಈ ವಿಷಯ ನಿಮಗೂ ತಿಳಿದಿದೆ. ನನಗೂ ತಿಳಿದಿದೆ. ಅವರಿಗೂ ತಿಳಿದಿದೆ. ಆದರೆ ನೀವು ಈ ಕುರಿತಾಗಿ ಯಾವುದೇ ವರದಿ ಮಾಡುವುದಿಲ್ಲ. ಯಾಕೆ? ನೀವು ಈ ಕುರಿತಾಗಿ ವಿವರಣೆ ನೀಡಬೇಕು, ಈ ಬಗ್ಗೆ ಮುಂದೊಂದು ದಿನ ನಾನು ವಿವರಣೆ ನೀಡುತ್ತೇನೆ ಎಂದು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡರು.
ಚೀನಾ ಇತ್ತೀಚಿಗಷ್ಟೇ ಕೊರೊನಾದಿಂದಾಗಿ ಮೃತಪಟ್ಟವರ ಅಧಿಕೃತ ಸಂಖ್ಯೆ ಬಿಡುಗಡೆ ಮಾಡಿದ್ದು 1300 ಹೊಸ ಸಾವುಗಳನ್ನು ಉಲ್ಲೇಖಿಸಲಾಗಿತ್ತು. ಹಾಗಾಗಿ ಚೀನಾದಲ್ಲಿ ಒಟ್ಟಾರೆ ಕೊರೊನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 4600ಕ್ಕೆ ಏರಿಕೆಯಾಗಿತ್ತು.