ಪ್ಯಾರಿಸ್, ಎ.20 (Daijiworld News/MB) : ಕುಡಿಯಲು ಬಳಸದ, ಬರೀ ಇತರ ಕಾರ್ಯಗಳಿಗಾಗಿ ಮಾತ್ರ ಬಳಸುವ ನೀರಿನಲ್ಲಿ ಕೊರೊನಾ ವೈರಸ್ನ ಅಲ್ಪ ಪ್ರಮಾಣದ ಕುರುಹುಗಳು ಪತ್ತೆಯಾಗಿರುವ ಘಟನೆ ಪ್ಯಾರಿಸ್ನಲ್ಲಿ ನಡೆದಿದೆ.
ಈ ಕೊರೊನಾದ ಕುರುಹುಗಳು ಪ್ಯಾರಿಸ್ನ ನೀರು ಪ್ರಾಧಿಕಾರ ಪ್ರಯೋಗಲಯವು ನಗರದ ಸುತ್ತಲೂ ಸಂಗ್ರಹ ಮಾಡಿದ 27 ಮಾದರಿಗಳ ಪೈಕಿ ನಾಲ್ಕರಲ್ಲಿ ಕೊರೊನಾ ಕುರುಹು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ನೀರಿನ ಮೂಲವನ್ನೇ ಬಂದ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪ್ಯಾರಿಸ್ನ ಪರಿಸರ ಅಧಿಕಾರಿ ಸೆಲಿಯಾ ಬ್ಲೇಯೆಲ್ ಎಂಬುವವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪ್ಯಾರಿಸ್ ನಗರದ ಅಧಿಕಾರಿ ರಸ್ತೆಯನ್ನು ಶುಚಿಗೊಳಿಸಲೆಂದು ಬಳಸಲಾಗುವ ಈ ನೀರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೊನಾ ವೈರಸ್ನ ಕುರುಹುಗಳು ಪತ್ತೆಯಾಗಿದೆ. ಆದರೆ ಕುಡಿಯುವ ನೀರಿನಲ್ಲಿ ಅಲ್ಲ. ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಜಾಲ ಸುರಕ್ಷಿತವಾಗಿದೆ. ಅದು ಪ್ರತ್ಯೇಕವಾಗಿದೆ. ಕುಡಿಯುವ ನೀರಿನಿಂದ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.
ಸೀನ್ ನದಿ ಹಾಗೂ ವರ್ಕ್ ಕಾಲುವೆಯಿಂದ ಪ್ಯಾರಿಸ್ನಲ್ಲಿ ನಗರದ ರಸ್ತೆಗಳ ಶುಚಿ ಕಾರ್ಯಕ್ಕಾಗಿ, ಉದ್ಯಾನವನಗಳ ಗಿಡಕ್ಕಾಗಿ ನೀರನ್ನು ಒದಗಿಸಲಾಗುತ್ತದೆ. ಪ್ರಸ್ತುತ ಈ ನೀರುಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.