ಲಂಡನ್, ಎ.20 (DaijiworldNews/PY) : ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್ ಕೋರ್ಟ್ ಈ ಹಿಂದೆ ಹೊರಡಿಸಿರುವ ಆದೇಶದ ವಿರುದ್ದ ವಿಜಯ ಮಲ್ಯ ಸಲ್ಲಿಸಿದ್ದ ಮೇಲ್ಮವಿಯನ್ನು ಲಂಡನ್ ಹೈಕೋರ್ಟ್ ವಜಾ ಮಾಡಿದ್ದು, ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಹಾಗೂ ಅರ್ಜಿದಾರರಾದ ಮಲ್ಯ ಅವರ ಮೇಲಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅರ್ಜಿಯನ್ನು ವಜಾ ಮಾಡಲಾಗುವುದು ಎಂದು ನ್ಯಾ.ಸ್ಟೆಫನ್ ಐರ್ವಿನ್ ನೇತೃತ್ವದ ಪೀಠ ತಿಳಿಸಿದೆ.
ಲಂಡನ್ ಹೈಕೋರ್ಟ್ ನೀಡಿರುವ ಆದೇಶದಿಂದ ವಿಜಯ ಮಲ್ಯ ಇನ್ನು ಭಾರತಕ್ಕೆ ವಾಪಾಸ್ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ.
ವಿಜಯ ಮಲ್ಯ ಅವರು ಭಾರತದ ಬ್ಯಾಂಕ್ಗಳಿಂದ ಕಿಂಗ್ಫಿಷರ್ ಏರ್ಲೈನ್ಸ್ಗೆ ಸಂಬಂಧಿಸಿದಂತೆ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದು, ಸದ್ಯ ಲಂಡನ್ನಲ್ಲಿ ನೆಲೆಸಿದ್ದಾರೆ. ಲಂಡನ್ ಹಾಗೂ ಭಾರತ ದೇಶಗಳ ನಡುವೆ ಮಲ್ಯ ಅವರಿಗೆ ಸಂಬಂಧಿಸಿದಂತೆ ಕೇಸುಗಳು ದಾಖಲಾಗಿದ್ದು, ಬಳಿಕ ಭಾರತಕ್ಕೆ ಅವರನ್ನು ಹಸ್ತಾಂತರಿಸಬೇಕು ಎಂದು ಲಂಡನ್ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಮಲ್ಯ ಅವರು ಮೇಲ್ಮನವಿ ಸಲ್ಲಿಸಿದ್ದರು.
ತಮ್ಮ ಆದೇಶದಲ್ಲಿ ಲಂಡನ್ ನ್ಯಾಯಾಧೀಶರು ಉಲ್ಲೇಖಿಸಿರುವ ಅಂಶಗಳಿಗೂ ಹಾಗೂ ಭಾರತದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗ ವ್ಯತ್ಯಾಸಗಳಿವೆ. ಅದಲ್ಲದೇ, ಇನ್ನೂ ಹೆಚ್ಚಿನ ರೀತಿಯಲ್ಲಿಯೇ ಜಿಲ್ಲಾ ನ್ಯಾಯಾಧೀಶರು ಆರೋಪಗಳ ಬಗ್ಗೆ ಉಲ್ಲೇಖೀಸಿದ್ದಾರೆ. ಈ ಕಾರಣದಿಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಈ ಆದೇಶದ ಕಾರಣದಿಂದ ವಿಜಯ ಮಲ್ಯ ಅವರು ಸದ್ಯ ಭಾರತಕ್ಕೆ ವಾಪಾಸ್ಸಾಗಲೇಬೇಕಿದೆ.