ವಾಷಿಂಗ್ಟನ್, ಏ 21 (Daijiworld News/MSP): ಸಾವಿನಲ್ಲಿ ಇಟಲಿಯನ್ನು ಮೀರಿಸಿದ ಅಮೇರಿಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಇದನ್ನು ಸರಿದೂಗಿಸಲು ಅಮೇರಿಕಾ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ಹೊಸದಾಗಿ ವಲಸಿಗರ ಪ್ರವೇಶಕ್ಕೆ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ, ಹಾಗೂ ಅಮೆರಿಕದ ನಾಗರಿಕರ ಉದ್ಯೋಗ ರಕ್ಷಣೆಗಾಗಿ ಟ್ರಂಪ್ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ
'ಅದೃಶ್ಯ ಶತ್ರುವಿನಿ ದಾಳಿ ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಗ್ರೇಟ್ ಅಮೆರಿಕದ ಪ್ರಜೆಗಳ ಉದ್ಯೋಗ ಕಾಪಾಡುವುದು ಅವಶ್ಯವಾಗಿದೆ. ಹೀಗಾಗಿ ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಮಾಡಲಿದ್ದೇನೆ' ಎಂದು ಮಂಗಳವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.
ಕಳೆದ ತಿಂಗಳಲ್ಲಿ ಸುಮಾರು 2.2 ಕೋಟಿ ಅಮೆರಿಕನ್ನರು ನಿರುದ್ಯೋಗ ಸೌಲಭ್ಯಗಳನ್ನು ಬಯಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಕೊರೊನಾದಿಂದ ಅನೇಕರು ನಿರುದ್ಯೋಗಿಗಳಾಗಿದ್ದಾರೆ ಎನ್ನುವುದು ಖಚಿತವಾಗಿದೆ. ಮಹಾ ಆರ್ಥಿಕ ಹಿಂಜರಿತದಿಂದ ಆರ್ಥಿಕತೆಗೆ ಪುಷ್ಠಿ ನೀಡಲು ಹಲವಾರು ಕ್ರಮಗಳ ಜೊತೆ ದೇಶದ ಅರ್ಥ ವ್ಯವಸ್ಥೆ ಹಾಗೂ ಅಮೆರಿಕನ್ನರ ಉದ್ಯೋಗ ಎರಡನ್ನೂ ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಟ್ರಂಪ್ ಹೇಳಿದ್ದಾರೆ.