ಉತ್ತರ ಕೊರಿಯಾ, ಏ 21 (Daijiworld News/MSP): ಸತತ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಾ ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕಾ ನಿದ್ಧೆಗೆಡಿಸಿದ್ದಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವಿನ ದವಡೆಯಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಕಿಮ್ ಜಾಂಗ್ ಉನ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಆ ಬಳಿಕ ಚೇತರಿಕೆ ಕಾಣದೆ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿದೆ ಎನ್ನಲಾಗಿದೆ. ಆದರೆ ಎಲ್ಲ ವಿಚಾರಗಳನ್ನು ಅತ್ಯಂತ ಗೌಪ್ಯವಾಗಿಸಿರುವ ಉತ್ತರ ಕೊರಿಯಾದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಏ .11ರಂದು ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಮಿಸೈಲ್ ಮೆನ್ ಏ.15 ರಂದು ತಾತನ ಹುಟ್ಟುಹಬ್ಬ ಆಚರಣೆಯ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ ಹಾಗೂ ಆ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ. ಇದು ಅನೇಕ ಅನುಮಾನ ಹುಟ್ಟುಹಾಕಿದೆ. ಇನ್ನು ಅಮೆರಿಕದ ಗುಪ್ತಚರ ಇಲಾಖೆ ಪ್ರಕಾರ ಕಿಮ್ ಜಾಂಗ್ ಅವರ ಆರೋಗ್ಯ ಬಿಗಡಾಯಿಸಿದೆ ಎಂದು ಹೇಳಿಕೊಂಡಿದೆ.
ಧೂಮಪಾನ, ಹೃದಯ, ಮೆದುಳಿಗೆ ಸಂಬಂಧಿಸಿದಂತೆ ಕಿಮ್ ಜಾಂಗ್ ಉನ್ ಆರೋಗ್ಯದ ವಿಷಯದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ವದಂತಿಗಳು ಹಬ್ಬಿದ್ದವು. ಸ್ಥೂಲಕಾಯ ಸರ್ವಾಧಿಕಾರಿ ಯಾವ ಕಾರಣಕ್ಕಾಗಿ ಸರ್ಜರಿಗೆ ಒಳಗಾಗಿದ್ದಾರೆ ಎನ್ನುವುದು ಇನ್ನು ತಿಳಿದುಬಂದಿಲ್ಲ. ಆದರೆ ಸರ್ಜರಿ ಬಳಿಕ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳನ್ನು ದೃಢಪಡಿಸಿಕೊಳ್ಳಲು ಉತ್ತರ ಕೊರಿಯಾದ ಶತ್ರು ದೇಶ ದಕ್ಷಿಣ ಕೊರಿಯಾ ಕಾರ್ಯೋನ್ಮುಖವಾಗಿದೆ.
ಕಿಮ್ ಕಾಂಗ್ ಉನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವುದು ಇದೇ ಮೊದಲೇನಲ್ಲ 2014 ರಲ್ಲಿಯೂ ಕಿಮ್ ಜಾಂಗ್ ಉನ್ ನಾಪತ್ತೆಯಾಗಿದ್ದರು. ಆಗಲೂ ಆತನ ಆರೋಗ್ಯದ ಬಗ್ಗೆ ಅನುಮಾನಗಳು ಮೂಡಿದ್ದವು.