ವುಹಾನ್, ಏ 22 (Daijiworld News/MSP): ಮನುಷ್ಯದ ದೇಹ ಹೊಕ್ಕಿದ ಕೋವಿಡ್ -೧೯ ವೈರಸ್ ನನ್ನು ಚಿಕಿತ್ಸೆ ನೀಡಿ ಹೊಡೆದೋಡಿಸಿದರೂ, ಅದು ಮನುಷ್ಯನ ದೇಹದೊಳಗೆ ನೂರಾರು ಅಡ್ಡಪರಿಣಾಮ ಬೀರುತ್ತದೆ ಅನ್ನೋದು ಇದೀಗ ಸ್ಪಷ್ಟವಾಗತೊಡಗಿದೆ.
ಯಾವುದೇ ರೋಗಲಕ್ಷಣಗಳನ್ನು ತೋರಿಸದ, ಹಾಗೂ ಗುಣಮುಖರಾದಂತೆ ಕಂಡರೂ ಪುನಃ ಸೋಂಕು ದೇಹದಲ್ಲಿ ಪ್ರತ್ಯಕ್ಷವಾಗುವ ಕೊರೊನಾ ಸೋಂಕು ಹೀಗೆ ಅನೇಕ ತರದಲ್ಲಿ ಸ್ವರೂಪ ಬದಲಾಯಿಸುತ್ತಲೇ ಇರುವ ಕೊರೊನಾ ಸೊಂಕು ತಜ್ಞರ ನಿದ್ದೆಗೆಡಿಸಿದೆ. ಇದೀಗ ಮತ್ತೊಂದು ಆಘಾತಕಾರಿ ವರದಿ ಕರೊನಾ ಸೋಂಕಿನ ತವರು ಚೀನಾದ ವುಹಾನ್ನಿಂದ ಹೊರಬಿದ್ದಿದೆ.
ಸೋಂಕು ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ವೈದ್ಯರಿಗೂ ಸೋಂಕು ತಗುಲಿ, ಗುಣಮುಖರಾಗಿದ್ದ ಚೀನದ ವೈದ್ಯರ ದೇಹದ ಚರ್ಮ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ವುಹಾನ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ. ಯಿ ಫ್ಯಾನ್ ಮತ್ತು ಡಾ. ಹು ವೈಫೆಂಗ್ ಎಂಬುವವರಿಗೆ ಕಳೆದ ಜನವರಿಯಲ್ಲಿ ಸೋಂಕು ತಗುಲಿತ್ತು. ಆ ಬಳಿಕ ಕೃತಕ ಉಸಿರಾಟದ ನೆರವಿನಿಂದ ಇಬ್ಬರೂ ಬದುಕುಳಿದಿದ್ದರು. ಇಬ್ಬರೂ ಗುಣಮುಖರಾಗಿದ್ದರು. ಆದರೆ ಇದೀಗ ಅವರ ದೇಹದ ಚರ್ಮ ಕಪ್ಪು ಬಣ್ಣಕ್ಕೆ ತಿರುಗತೊಡಗಿ ಇದೀಗ ಸಂಪೂರ್ಣ ದೇಹ ಕಪ್ಪಾಗಿದೆ.
ವೈರಾಣು ಶ್ವಾಸಕೋಶವನ್ನು ಹಾನಿಗೊಳಿಸಿರುವುದೇ ಚರ್ಮ ಕಪ್ಪಾಗಲು ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದರೂ ಈ ನಿಟ್ಟಿನಲ್ಲಿ ಅಧ್ಯಯನ ಪ್ರಾರಂಭವಾಗಿದೆ. ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ವೈರಾಣು ಶ್ವಾಸಕೋಶಕ್ಕೆ ತೀವ್ರ ಹಾನಿ ಮಾಡಿತ್ತು. ಇದರಿಂದ ಹಾರ್ಮೋನ್ಗಳಲ್ಲಿ ವ್ಯತ್ಯಾಸ ಉಂಟಾಗಿ ಚರ್ಮದ ಬಣ್ಣ ಬದಲಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.