ಜಿನಿವಾ, ಎ.23 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ಶೀಘ್ರದಲ್ಲೇ ಕೊನೆಗೊಳ್ಳದ, ದೀರ್ಘಕಾಲ ಇರುವ ಕಾಯಿಲೆಯಾಗಿದೆ ಎಂದು ಬುಧವಾರ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಗೆಬ್ರೆಯೆಸಸ್ ಅವರು, ನಾವು ಕೊರೊನಾದೊಂದಿಗೆ ಇನ್ನೂ ತುಂಬಾ ದೂರ ಹೆಜ್ಜೆ ಹಾಕಬೇಕಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಆರಂಭಿಕ ಹಂತದಲ್ಲಿದೆ. ಆ ರಾಷ್ಟ್ರಗಳು ಈಗಷ್ಟೇ ಕೊರೊನಾ ವಿರುದ್ದ ಹೋರಾಟ ಪ್ರಾರಂಭಿಸಿವೆ. ಮನೆಗಳಲ್ಲೇ ಇರಬೇಕು ಎಂಬ ಆದೇಶಗಳನ್ನು ಪಾಲಿಸುವುದರಲ್ಲಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ವಿಚಾರವಾಗಿ ಯಾವುದೇ ಪ್ರಶ್ನೆಗಳಿಲ್ಲ. ಈಗಾಗಲೇ ಇದರಿಂದಾಗಿ ಹಲವು ದೇಶಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಜಗತ್ತಿನಾದ್ಯಂತ 26 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 1.80 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢವಾಗಿದ್ದು, 652 ಮಂದಿ ಸಾವನ್ನಪ್ಪಿದ್ದಾರೆ.