ದುಬೈ, ಏ 24(Daijiworld News/MSP): ಪ್ರಪಂಚದಾದ್ಯಂತ ತಲ್ಲಣ ಮೂಡಿಸಿರುವ ಕರೋನವೈರಸ್ ನಿಂದ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಂಕಷ್ಟ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಲು ದುಬೈ ಅನಿವಾಸಿ ಕನ್ನಡಿಗರು ಕಾನ್ಸುಲೇಟ್ ಜನರಲ್ ದುಬೈ ವಿಪುಲ್ ಷಾ ಹಾಗೂ ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷರಾದ ಆರತಿ ಕೃಷ್ಣ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಕರೋನ ವೈರಸ್ ಭೀಕರತೆ ಕಡಿಮೆಯಾದಾಗ ಭಾರತ ದೇಶಕ್ಕೆ ಮರಳಲು ವಿಮಾನಯಾನ ಪುನರ್ ಆರಂಭವಾದಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಆದ್ಯತೆಗಳ ಕುರಿತು ಚರ್ಚಿಸಲಾಯಿತು. ವಿಮಾನಯಾನ ಪುನರ್ ಆರಂಭವಾದಾಗ ಯುಎಈಯಲ್ಲಿರವ ಅನಿವಾಸಿಗಳನ್ನು ವಾಪಾಸು ಕರೆತರಲು ಕೇಂದ್ರ ಸರ್ಕಾರ ಏನು ಪೂರ್ವ ತಯಾರಿ ನಡೆಸಿದೆ ಎಂದು ಕರ್ನಾಟಕ ಎನ್ನಾರೈ ಫೋರಂ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಉತ್ತರಿಸಿದ ವಿಪುಲ್ ಈವರೆಗೆ ಯಾವುದೇ ಅಂತಿಮ ನಿರ್ಧಾರ ಕೇಂದ್ರ ಸರ್ಕಾರ ಕೈಗೊಂಡಿಲ್ಲ, ಶೀಘ್ರವೇ ವಿದೇಶಾಂಗ ಸಚಿವಾಲಯ ಅಂತಿಮ ತೀರ್ಮಾನಕ್ಕೆ ಬರಲಿದೆ ಆ ಕೂಡಲೇ ನಿಮ್ಮ ಗಮನಕ್ಕೆ ತರುವೆನೆಂದು ತಿಳಿಸಿದರು.
ವಿಮಾನಯಾನ ಶುರುವಾದಾಗ ಗರ್ಭಿಣಿ ಮಹಿಳೆಯರಿಗೆ ಮತ್ತು ಹಿರಿಯರಿಗೆ, ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರಿಗೆ, ಕೆಲಸ ಕಳೆದುಕೊಂಡ ಅನಿವಾಸಿ ಭಾರತೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ದುಬೈ ಅನಿವಾಸಿ ಕನ್ನಡಿಗರು ಅಧ್ಯಕ್ಷರಾದ ಉದ್ಯಮಿ ನವೀದ್ ಮಾಗುಂಡಿ ಒತ್ತಾಯಿಸಿದರು, ಈ ಬೇಡಿಕೆಯನ್ನು ನಾವು ಸ್ವತಃ ಮುಂದೆ ನಿಂತು ಪಾಲಿಸುವ ವ್ಯವಸ್ಥೆ ಮಾಡುವುದಾಗಿ ವಿಪುಲ್ ಭರವಸೆ ನೀಡಿದರು.
ಐಸೋಲೇಶನ್ ವಾರ್ಡ್ ವ್ಯವಸ್ಥೆ ಕುರಿತು ಬಿಸಿಸಿಐ ಯುಎಈ ಘಟಕದ ಉಪಾಧ್ಯಕ್ಷರಾದ ಹಿದಾಯತ್ ಅಡ್ಡೂರು ರವರ ಪ್ರಶ್ನೆಗೆ ಉತ್ತರಿಸಿದ ಕಾನ್ಸುಲೇಟ್ ಜನರಲ್ ವಿಪುಲ್, ಉದ್ಯಮಿ ಅಜಾದ್ ಮುಪೇನ್ ಒಡೆತನದ ಆಸ್ಪತ್ರೆಯಾದ ಆಸ್ಟರ್ ಗ್ರೂಪಿನಿಂದ ಹಲವಾರು ಡಾಕ್ಟರ್ ಮತ್ತು ನರ್ಸುಗಳು ಭಾರತೀಯ ಅನಿವಾಸಿಗಳ ಒಕ್ಕೂಟದಿಂದ ಕ್ವಾರಂಟೈನ್ ಮಾಡಿರುವ ಸ್ಥಳಗಳಲ್ಲಿ ಸೇವೆಸಲ್ಲಿಸುತ್ತಿದ್ದು, ಯಾವುದೇ ಅನಿವಾಸಿ ಭಾರತೀಯರಿಗೆ ಕೋವಿಡ್ ವೈರಸ್ ಸೋಂಕು ಧೃಡಪಟ್ಟು ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯಲು ವಿಳಂಬವಾದರೆ ನೀವು ಕೂಡಲೇ ದುಬೈ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಅನಿವಾಸಿ ಭಾರತೀಯ ಸಮಿತಿ ಮಾಜಿ ಉಪಾಧ್ಯಕ್ಷರಾದ ಆರತಿ ಕೃಷ್ಣ ರವರು ಕನ್ನಡಿಗರ ಯಾವುದೇ ಸಮಸ್ಯೆಗಳ ಕುರಿತು ಕರ್ನಾಟಕ ಸರಕಾರದ ಗಮನಕ್ಕೆ ತರಲು ಸದಾ ತಯಾರಿದ್ದು, ವಿಮಾನ ಪ್ರಯಾಣ ಪ್ರಾರಂಭವಾದಾಗ ರಾಜ್ಯದಲ್ಲಿ ಹೇಗೆ ಕ್ವಾರಂಟೈನ್ ಮಾಡಬೇಕು, ಏನೆಲ್ಲಾ ಮುನ್ನೆಚ್ಟರಿಕೆ ಕ್ರಮ ಕೈಗೊಳ್ಳಬೇಕು, ಹೇಗೆ ಜಿಲ್ಲಾವಾರು ಸ್ಥಳ ಗುರುತಿಸಬೇಕು ಎಂಬ ಬಗ್ಗೆ ದುಬೈ ಕನ್ನಡಿಗರು ಏನೇ ಸಲಹೆ ನೀಡಿದರೂ ಅದನ್ನು ಕೇಂದ್ರ ವಾಯುಯಾನ ಸಚಿವರಾದ ಶ್ರೀ ಹರ್ದೀಪ್ ಪುರಿ ಮತ್ತು ಕೇಂದ್ರ ವಾಯುಯಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಸಿಂಗ್ ಖರೊಲ, ವಿದೇಶಿ ಮಂತ್ರಾಲಯದ ಅರಬ್ ವಿಭಾಗದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಟಿ.ವಿ. ನಾಗೇಂದ್ರ ಪ್ರಸಾದ್, ವಿದೇಶಿ ಕಾರ್ಯದರ್ಶಿಗಳಾದ ಶ್ರೀ ಹರ್ಷವರ್ಧನ್ ಶ್ರಿಂಗ್ಲ ಮತ್ತು ವಿಶೇಷ ಟಾಸ್ಕ್ ಫೋರ್ಸ್ ತಂಡದ ಗಮನಕ್ಕೆ ತರುವೆ ಎಂದು ಅವರು ಭರವಸೆ ನೀಡಿದರು.
ವಿಮಾನಯಾನ ಪುನರಾರಂಭವಾದಾಗ ಭಾರತ ಮರಳಲು ಇಚ್ಚಿಸುವ ಬಡ ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್ ವ್ಯವಸ್ಥೆ ಮಾಡಬೇಕು, ಮೇ ಜೂನ್ ಸಮಯದಲ್ಲಿ ವಿಮಾನ ಪ್ರಯಾಣದ ದರ ಹೆಚ್ಚಿರುತ್ತದೆ, ಅದರಿಂದಾಗಿ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಹರೀಶ್ ಶೇರಿಗಾರ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ವಿಪುಲ್ ಇದಕ್ಕಾಗಿ ನಾವು 'ಇಂಡಿಯನ್ ಕಮ್ಯುನಿಟಿ ವೆಲ್ಫೇರ್ ಪಂಢ್' ಅನ್ನು ಬಳಸಿ ಹೆಚ್ಟಿನ ಸಂಖ್ಯೆಯಲ್ಲಿ ಅನುಕೂಲ ಒದಗಿಸುವ ಕೆಲಸ ಮಾಡಲಿದ್ದೇವೆ, ಅದೇ ರೀತಿ ಭಾರತೀಯ ಉದ್ಯಮಿಗಳು, ಅನಿವಾಸಿ ಸಂಘಟನೆಗಳ ಸಹಾಯವನ್ನು ಪಡೆದು ಹೆಚ್ಚಿನ ಭಾರತೀಯರಿಗೆ ವ್ಯವಸ್ಥೆ ಮಾಡಲು ಪ್ರಯತ್ನಿಸೋಣ ಎಂದರು.
ದುಬೈ ಅನಿವಾಸಿ ಕನ್ನಡಿಗರು ತಂಡದ ನವೀದ್ ಮಾಗುಂಡಿ, ಹಿದಾಯತ್ ಅಡ್ಡೂರು, ಸುನಿಲ್ ಅಂಬಳತರೆ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಮಾಡಲಾಗುತ್ತಿರುವ ಊಟದ ವ್ಯವಸ್ಥೆ, ಔಷಧಿ ವ್ಯವಸ್ಥೆ, ರೇಷನ್ ಪೂರೈಕೆ ಕುರಿತು ಕರ್ನಾಟಕ ಮೀಡಿಯಾ ಫೋರಂ ಯುಎಈ ಅಧ್ಯಕ್ಷ ಇಮ್ರಾನ್ ಖಾನ್ ದುಬೈ ಕಾನ್ಸುಲೇಟ್ ಜನರಲ್ ಗಮನಕ್ಕೆ ತಂದರು. ಇಂತಹಾ ಸೇವೆಗೆ ನಮ್ಮ ಭಾರತೀಯ ಸಂಸ್ಥೆಗಳು, ಸಮುದಾಯಗಳು ಹೆಸರುವಾಸಿಯಾಗಿದ್ದು ಎಂದು ಪ್ರಶಂಸಿಸಿದರು.
ವೀಡಿಯೋ ಕಾನ್ಫರೆನ್ಸ್ ನಲ್ಲಿ ದುಬೈ ಅನಿವಾಸಿ ಕನ್ನಡಿಗರ ಉಪಾಧ್ಯಕ್ಷರಾದ ಅಡ್ವಕೇಟ್ ಸುನಿಲ್ ಅಂಬಳತರೆ, ಬಸವ ಸಮಿತಿ ದುಬೈ ಸಂಸ್ಥೆಯ ಪರವಾಗಿ ಚಂದ್ರಶೇಖರ್ ಲಿಂಗದಹಳ್ಳಿ, ಕರ್ನಾಟಕ ಸಂಘ ದುಬೈ ಇದರ ಪ್ರಧಾನ ಕಾರ್ಯದರ್ಶಿ ದಯಾ ಕಿರೋಡಿಯನ್, ಉದ್ಯಮಿ ರೊನಾಲ್ಡ್ ಮಾರ್ಟಿಸ್ ಪಾಲ್ಗೊಂಡಿದ್ದರು