ವುಹಾಂಗ್, ಎ.25 (Daijiworld News/MB) : ಪ್ರಪಂಚದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಲ್ಲೇ ಇದ್ದು ದಿನದಿಂದ ದಿನಕ್ಕೆ ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ಏರಿಕೆಯಾಗುತ್ತದೆ. ಶನಿವಾರದವರೆಗೆ ವಿಶ್ವದಾದ್ಯಂತ ಸುಮಾರು 28 ಲಕ್ಷಕ್ಕಿಂತ ಅಧಿಕ ಜನರಿಗೆ ಈ ಸೋಂಕು ತಗುಲಿದ್ದು ಸುಮಾರು 1,97,306 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಶುಕ್ರವಾರ 2,744,511 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು 192,982 ಜನರು ಸಾವನ್ನಪ್ಪಿದ್ದರು.
ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಹಾಗೂ ಸಾವು ದಾಖಲಾಗಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 8,90,524 ಕ್ಕೆ ಏರಿಕೆಯಾಗಿದ್ದು ಮೃತರ ಸಂಖ್ಯೆ 52 ಸಾವಿರದ ಗಡಿ ದಾಟಿದೆ. ಅಮೆರಿಕದ ನಂತರದ ಸ್ಥಾನದಲ್ಲಿರುವ ಸ್ಪೇನ್ನಲ್ಲಿ 219,764 ಜನರಿಗೆ ಸೋಂಕು ತಗುಲಿದ್ದು 22,524 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಪ್ರಪಂಚದಲ್ಲೇ ಕೊರೊನಾ ಸೋಂಕು ಮೊದಲು ಪತ್ತೆಯಾದ ಚೀನಾದಲ್ಲಿ ಸೋಂಕಿತರ ಸಂಖ್ಯೆ 83,885 ಏರಿಕೆಯಾಗಿದೆ. ಸೋಂಕು ಪ್ರಕರಣಗಳು ಕಡಿಮೆಯಾಗಿರುವ ಇಲ್ಲಿ ಶುಕ್ರವಾರ 12 ಹೊಸ ಪ್ರಕರಣ ಮಾತ್ರ ದಾಖಲಾಗಿದೆ. ಯಾವುದೇ ಹೊಸ ಸಾವುಗಳು ದಾಖಲಾಗಿಲ್ಲ.
ಇಟಲಿಯಲ್ಲಿ 1,92,994 ಮಂದಿ, ಫ್ರಾನ್ಸ್ನಲ್ಲಿ 1,59,495, ಜರ್ಮನಿ 1,54,545, ಬ್ರಿಟನ್ 1,44,635, ಭಾರತದಲ್ಲಿ 24,506 ಜನರಲ್ಲಿ ಸೋಂಕು ದೃಢಪಟ್ಟಿದೆ.