ವಾಷಿಂಗ್ಟನ್, ಎ.25 (Daijiworld News/MB) : ಕೊರೊನಾ ಸೋಂಕಿಗೆ ಔಷಧ ಕಂಡು ಹಿಡಿಯಲು ವಿಶ್ವದೆಲ್ಲೆಡೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡಿ ಎಂದು ಸಲಹೆ ನೀಡಿ ಪೇಚಿಗೆ ಸಿಲುಕಿದ್ದಾರೆ.
ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕಿತರನ್ನು ಗುಣಮುಖ ಮಾಡಲು ನೀಡಿರುವ ಸಲಹೆಯಿಂದ ವೈದ್ಯರು, ವಿಜ್ಞಾನಿಗಳು ಶಾಕ್ ಆಗಿರುವುದು ಮಾತ್ರವಲ್ಲದೇ ಹಲವರು ಟ್ರಂಪ್ನ ಈ ಸಲಹೆಯನ್ನು ಟೀಕೆ ಮಾಡಿದ್ದಾರೆ.
ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತಾನಾಡಿದ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ನ್ನು ಪರಿಸರದಲ್ಲಿ ನಾಶ ಮಾಡಲು ಬ್ಲೀಚ್ ಸೇರಿದಂತೆ ಸೋಂಕು ನಿವಾರಕಗಳನ್ನು ಬಳಸುತ್ತೇವೆ. ಅದೇ ರೀತಿ ಕೊರೊನಾ ಸೋಂಕಿತರಿಗೆ ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ಚುಚ್ಚು ಮದ್ದುಗಳ ಮೂಲಕ ನೀಡಿ ಸೋಂಕು ನಿವಾರಣೆ ಮಾಡಬಹುದು. ಇದರಿಂದಾಗಿ ಮನುಷ್ಯನ ಶ್ವಾಸಕೋಶವೂ ಸ್ವಚ್ಛವಾಗಲಿದೆ. ಇದನ್ನು ವೈದ್ಯರು, ವಿಜ್ಞಾನಿಗಳು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಹೇಳಿಕೆಯ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿ ಟೀಕೆ ಮಾಡಿದ್ದು ಆ ಬಳಿಕ ಅಧ್ಯಕ್ಷರ ಕಚೇರಿಯಿಂದ ಟ್ರಂಪ್ ಹೇಳಿಕೆ ಕುರಿತಾಗಿ ಸ್ಪಷ್ಟನೆ ನೀಡಲಾಗಿದ್ದು ಟ್ರಂಪ್ ಅದನ್ನು ವ್ಯಂಗ್ಯ ಮಾಡಿ ಹೇಳಿದ್ದಾರೆ ಎಂದು ತಿಳಿಸಿದೆ.