ವುಹಾನ್, ಎ.26 (Daijiworld News/MB) : ವಿಶ್ವದಲ್ಲೇ ಕೊರೊನಾ ಮೊದಲು ಪತ್ತೆಯಾದ ವುಹಾನ್ನಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಮಾಡಿರುವ ಏ. 26 ರ ತನಕ ವುಹಾನ್ನಲ್ಲಿ ಯಾವುದೇ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಪರಿಸ್ಥಿತಿಯನ್ನು ಈ ರೀತಿ ನಿಯಂತ್ರಣಕ್ಕೆ ತರಲು ಶ್ರಮ ವಹಿಸಿದ ಎಲ್ಲಾ ಜನತೆಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಚೀನಾದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ. 56% ಪಕ್ರರಣಗಳು ವುಹಾನ್ನಲ್ಲೇ ದೃಢಪಟ್ಟಿದ್ದು ಈವರೆಗೆ ವುಹಾನ್ನಲ್ಲಿ 46452 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಹಾಗೆಯೇ ಇಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆಯು ಚೀನಾದ ಒಟ್ಟು ಮೃತರ 84% ದಷ್ಟು ಇಲ್ಲಿಯೇ ಆಗಿದೆ. ಈವರೆಗೆ ವುಹಾನ್ನಲ್ಲಿ 3869 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಚೀನಾದಲ್ಲಿ 4,636 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಅಮೆರಿಕಾದಲ್ಲಿ ದೃಢಪಟ್ಟಿದ್ದು ಜಗತ್ತಿನಲ್ಲಿ 28 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಸುಮಾರು 2 ಲಕ್ಷ ಮಂದಿ ಈವರೆಗೆ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.