ವಾಷಿಂಗ್ಟನ್, ಮೇ.01 (DaijiworldNews/PY) : ಚೀನಾದ ವುಹಾನ್ ಲ್ಯಾಬ್ನಿಂದಲೇ ಕೊರೊನಾ ವೈರಸ್ ಹರಡಿದೆ. ಅದನ್ನು ಚೀನಾದಲ್ಲಿಯೇ ತಡೆದಿದ್ದರೆ ಇಡೀ ವಿಶ್ವಕ್ಕೆ ಹರಡುವುದನ್ನು ತಡೆಯಬಹುದಿತ್ತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶ್ವೇತಭವನದಲ್ಲಿ ಮಾತನಾಡಿದ ಅವರು, ಈ ಮಾಹಿತಿಯನ್ನು ಹೇಳಿದ್ದಾರೆ. ಆ ಬಗ್ಗೆ ಏನಾದರೂ ಖಚಿತವಾದ ಮಾಹಿತಿ ನಿಮ್ಮೊಂದಿಗೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದೆಂದು ಉತ್ತರಿಸಿದ್ದು, ವಿಸ್ತೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ಶೀಘ್ರವೇ ದೊರೆಯಲಿದೆ. ಈ ವಿಷಯವಾಗಿ ನಾನು ಹೆಚ್ಚು ಮಾಹಿತಿ ನೀಡುವಂತಿಲ್ಲ. ಅಲ್ಲದೇ, ನನಗೆ ಅನುಮತಿಯೂ ಇಲ್ಲ ಎಂದಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹೊಣೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೆಂದು ಹೇಳುವುದಿಲ್ಲ. ಆದರೆ, ಅದನ್ನು ಖಂಡಿತವಾಗಿಯೂ ಮೂಲದಲ್ಲಿಯೇ ತಡೆಯಬಹುದಿತ್ತು. ಅದನ್ನು ಚೀನಾದಲ್ಲಿಯೇ ತಡೆದಿದ್ದರೆ ಇಡೀ ವಿಶ್ವಕ್ಕೇ ಹರಡುವುದನ್ನು ತಡೆಯಬಹುದಿತ್ತು ಎಂದು ತಿಳಿಸಿದರು.