ಕೊರಿಯಾ,ಮೇ 2 (Daijiworld News/MSP): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬಗ್ಗೆ ಎದ್ದಂತಹ ಸಾಕಷ್ಟು ಊಹಾಪೋಹಾಗಳಿಗೆ ಕೊನೆಗೂ ತೆರೆಬಿದ್ದಿದೆ. ಕಾರ್ಯಕ್ರಮವೊಂದರಲ್ಲಿ ಕಿಮ್ ಜಾಂಗ್ ಉನ್ ಭಾಗಿಯಾಗುವುರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಕಿಮ್ ಜಾಂಗ್ ಕಳೆದ 20 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾರಣ ಅವರ ಅರೋಗ್ಯದ ಬಗ್ಗೆ ಹಾಗೂ ಅವರ ಸಾವಿನ ಬಗ್ಗೆಯೂ ಸಾಕಷ್ಟು ವದಂತಿ ಸೃಷ್ಟಿಯಾಗಿತ್ತು. ಆದರೆ ಶುಕ್ರವಾರ ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದ ಸುಂಚೊನ್ ನಗರದಲ್ಲಿ ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜೊತೆ ಗೊಬ್ಬರ ಕಾರ್ಖಾನೆಯೊಂದರ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಿಢೀರ್ ಪ್ರತ್ಯಕ್ಷವಾದಾಗ ಅಲ್ಲಿ ಭಾಗವಹಿಸಿದ್ದವರು ಕಿಮ್ ಕಂಡು ಹರ್ಷೋದ್ಘಾರ ವ್ಯಕ್ತಪಡಿಸಿದರು. ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಕಿಮ್ ಜಾಂಗ್ ಆಗಮಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು ಎಂದು ಕೊರಿಯಾದ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಈ ವೇಳೆ ಮಾತನಾಡಿದ ಸಾರ್ವಧಿಕಾರಿ, " ಆಧುನಿಕ ಫಾಸ್ಫಾಟಿಕ್ ರಸಗೊಬ್ಬರ ಕಾರ್ಖಾನೆಯನ್ನು ನಮ್ಮ ದೇಶದಲ್ಲಿ ನಿರ್ಮಿಸಲಾಗಿದೆ ಎಂಬ ಸುದ್ದಿಯನ್ನು ನನ್ನಜ್ಜ ಕಿಮ್ ಇಲ್ ಸುಂಗ್ ಮತ್ತು ತಂದೆ ಕಿಮ್ ಜೊಂಗ್ ಇಲ್ ಕೇಳಿದ್ದರೆ ಇಂದು ತುಂಬಾ ಸಂತೋಷ ಪಡುತ್ತಿದ್ದರು ಎಂದು ತಾತ, ತಂದೆಯನ್ನು ನೆನೆದು ತುಂಬಾ ಭಾವುಕರಾದರು ಎಂದು ಪತ್ರಿಕೆ ಹೇಳಿದೆ. ಆದರೆ, ಕಿಮ್ ಜಾಂಗ್ ಉನ್ ಭಾಗವಹಿಸಿದ ಕಾರ್ಯಕ್ರಮದ ಫೋಟೋವನ್ನು ಕೊರಿಯಾ ಈವರೆಗೆ ಬಿಡುಗಡೆ ಮಾಡಿಲ್ಲ. ಮಾತ್ರವಲ್ಲದೆ ಏ.೧೧ ರ ಬಳಿಕ ಮೂರು ವಾರಗಳವರೆಗೆ ಸಾರ್ವಧಿಕಾರಿ ಎಲ್ಲಿದ್ದರು , ಏನೂ ಮಾಡುತ್ತಿದ್ದರು ಎಂಬುದಕ್ಕೆ ಇನ್ನು ಸ್ಪಷ್ಟ ಉತ್ತರ ದೊರೆಕಿಲ್ಲ.