ವಾಷಿಂಗ್ಟನ್, ಮೇ 05 (DaijiworldNews/PY) : ವಿಶ್ವದ ಹಲವು ರಾಷ್ಟ್ರಗಳು ಹಾಗೂ ಸಂಸ್ಥೆಗಳು ಕೊರೊನಾ ವೈರಸ್ಗೆ ಪ್ರತಿಯಾಗಿ ಸಂಭವನೀಯ ಲಸಿಕೆ ಹಾಗೂ ಚಿಕಿತ್ಸೆಯನ್ನು ಸಂಶೋಧನೆ ಮಾಡಲು, ತಯಾರಿಸಲು ಹಾಗೂ ವಿತರಣೆ ಮಾಡುವ ಸಲುವಾಗಿ 8 ಬಿಲಿಯನ್ ಡಾಲರ್ ನೆರವಿನ ವಾಗ್ದಾನ ನಡೆಸಿದೆ. ಆದರೆ, ದೇಣಿಗೆ ನೀಡಲು ಅಮೆರಿಕ ನಿರಾಕರಿಸಿದೆ.
ಐರೋಪ್ಯ ಆಯೋಗವು ಸೋಮವಾರ ಆಯೋಜನೆ ಮಾಡಿದ್ದ ವಿಡಿಯೋ ಕಾನ್ಫರೆನ್ಸ್ ಶೃಂಗದಲ್ಲಿ ವಿಶ್ವದ ರಾಷ್ಟ್ರಗಳು ಹಾಗೂ ಸಂಸ್ಥೆಗಳು ಪಾಲ್ಗೊಂಡಿದ್ದು, ಆರ್ಥಿಕ ನೆರವಿಗಾಗಿ ವಾಗ್ದಾನ ನಡೆಸಿದವು.
ಕೆಲವೇ ಗಂಟೆಗಳಲ್ಲಿ ಕೊರೊನಾ ವೈರಸ್ ಲಸಿಕೆ, ರೋಗನಿರ್ಣಯ ಹಾಗೂ ಚಿಕಿತ್ಸೆಗಾಗಿ 8.1 ಬಿಲಿಯನ್ ಹಣವನ್ನು ಶೃಂಗದಲ್ಲಿ ಸಂಗ್ರಹಣೆ ಮಾಡಲಾಗಿದೆ. ಈ ಹಣವನ್ನು ಕೊರನಾ ವೈರಸ್ ರೋಗ ಪತ್ತೆ, ಔಷಧ ಸಂಶೋಧನೆ ಹಾಗೂ ವಿತರಣೆಗಾಗಿ ವಿನಿಯೋಗ ಮಾಡಲಾಗುವುದು. ಈ ಬೆಳವಣಿಗೆಯು ಜಾಗತಿಕ ಸಹಕಾರಕ್ಕೆ ಉತ್ತೇಜನ ನೀಡಲಿದೆ ಎಂಬುದಾಗಿ ಆನ್ಲೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯರೋಪಿಯನ್ ಆಯೋಗದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ತಿಳಿಸಿದ್ದಾರೆ.
ಆದರೆ, ಕೊರೊನಾ ವೈರಸ್ ವಿರುದ್ದದ ಈ ಹೋರಾಟಕ್ಕಾಗಿ ಹಣ ಸಂಗ್ರಹಣೆ ಮಾಡುವ ಈ ಯತ್ನದಲ್ಲಿ ಅಮೆರಿಕ ಪಾಲ್ಗೊಳಲಿಲ್ಲ ಎಂದು ಐರೋಪ್ಯ ಆಯೋಗ ತಿಳಿಸಿದೆ.
ನಾವು ಕೊರೊನಾ ವೈರಸ್ನ ವಿರುದ್ದದ ಪ್ರಯತ್ನವನ್ನು ಬೆಂಬಲಿಸುತ್ತೇವೆ. ಸೋಂಕು ವಿರುದ್ದ ನಡೆಯುತ್ತಿರುವ ಹಲವಾರು ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಈಗಾಗಲೇ ಇಂತಹ ಕೆಲಸದಲ್ಲಿ ಅಮೆರಿಕ ಮುಂದಿದೆ. ಎಂದು ದೂರಾವಾಣಿ ಮೂಲಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.
ಎಲ್ಲಾ ರಾಷ್ಟ್ರಗಳಿಗೆ ಮುಂದೆ ಅನ್ವೇಷಣೆಗೊಳ್ಳಲಿರುವ ಲಸಿಕೆಯು ಲಭ್ಯವಾಗಬೇಕು. ಕೇವಲ ಈ ಲಸಿಕೆ ಶ್ರೀ ಮಂತ ರಾಷ್ಟ್ರಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಿಳಿಸಿದರು.
ಜಗತ್ತಿನ ಹಲವು ರಾಷ್ಟ್ರಗಳು ಕೊರೊನಾ ವೈರಸ್ ವಿರುದ್ದ ಪ್ರದರ್ಶಿಸಿರುವ ಈ ಪ್ರಯತ್ನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಶ್ಲಾಘಿಸಿದ್ದು, ಜಾಗತಿಕ ಒಗ್ಗಟ್ಟಿನ ಪ್ರಬಲ ಹಾಗೂ ಸ್ಪೂರ್ತಿದಾಯಕ ಪ್ರದರ್ಶನ ಇದಾಗಿದೆ ಎಂದು ಹೇಳಿದ್ದಾರೆ.